Hasanamba Temple : ಹಾಸನ : ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನಕ್ಕೆ ಭಕ್ತರ ದಂಡು ನಿರೀಕ್ಷೆಗೂ ಮೀರಿ ಹರಿದು ಬರುತ್ತಿದ್ದು, ಕೇವಲ 5 ದಿನಗಳಲ್ಲಿ ದೇವಾಲಯಕ್ಕೆ ಕೋಟಿಗಟ್ಟಲೆ ಆದಾಯ ಹರಿದು ಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 14 ರ ಬೆಳಿಗ್ಗೆಯವರೆಗೆ 1,000 ಮತ್ತು ₹ 300 ರ ವಿಶೇಷ ದರ್ಶನದ ಟಿಕೆಟ್‌ಗಳು ಹಾಗೂ ಲಾಡು ಪ್ರಸಾದ ಮಾರಾಟದಿಂದ ಒಟ್ಟು 4,21,73,760 ರಷ್ಟು ಹಣ ಸಂಗ್ರಹವಾಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಈ ವರ್ಷ ಮೊದಲ ಐದು ದಿನಗಳಲ್ಲೇ ಹೆಚ್ಚಿನ ಆದಾಯ ಬಂದಿದೆ ಎಂದು ಸಚಿವರು ತಿಳಿಸಿದರು. ಇಂದು ಮಧ್ಯಾಹ್ನದ ವೇಳೆಗೆ ₹ 1,000 ರೂಪಾಯಿಯ 3,600 ಟಿಕೆಟ್‌ಗಳು ಮತ್ತು ಬೆಳಿಗ್ಗೆಯಿಂದ 300 ರೂಪಾಯಿಯ 6,000 ಟಿಕೆಟ್‌ಗಳು ಮಾರಾಟವಾಗಿವೆ. ಆದಾಯಕ್ಕಿಂತ ಭಕ್ತರಿಗೆ ಶೀಘ್ರವಾಗಿ ದೇವಿ ದರ್ಶನ ಮಾಡಿಸುವುದೇ ಮುಖ್ಯವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
Hasanamba Temple ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆ:
ಸಾರ್ವಜನಿಕ ದರ್ಶನದ ಐದನೇ ದಿನವಾದ ಇಂದು ಬೆಳಿಗ್ಗೆಯಿಂದ ಇದುವರೆಗೆ 1,22,600 ಭಕ್ತರು ದರ್ಶನ ಪಡೆದಿದ್ದಾರೆ. ಶುಕ್ರವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 6,40,700 ಜನ ದರ್ಶನ ಮಾಡಿದ್ದಾರೆ.ಸೋಮವಾರದಂದು 1,10,000ಜನರನ್ನು ನಿರೀಕ್ಷಿಸಲಾಗಿತ್ತು. ಆದರೆ, 2,29,000 ಜನ ಆಗಮಿಸಿ ದರ್ಶನ ಮಾಡಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವಾಡಿಕೆಗಿಂತ ದ್ವಿಗುಣ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಎಂದು ಸಚಿವರು ಮಾಹಿತಿ ನೀಡಿದರು.
