ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಪಟಾಕಿ ಸಿಡಿಸದಂತೆ ಬುದ್ಧಿವಾದ ಹೇಳಿದ ವ್ಯಕ್ತಿಯ ಮನೆಯತ್ತ ರಾಕೆಟ್ ಪಟಾಕಿ ಹಾರಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಮಂಗಳವಾರ ನಡೆದ ಪ್ರಕರಣದಲ್ಲಿ ರೌಡಿಶೀಟರ್ ಒಬ್ಬನ ಹಾವಳಿ ಕುರಿತಾಗಿ ಸ್ಥಳೀಯರೇ ಬೇಸತ್ತಿದ್ದು, ಎಸ್ಪಿ ಕಚೇರಿ ಮುಂದೆಯು ಪ್ರತಿಭಟನೆ ನಡೆಸಿದ್ದಾರೆ. ಇದು ಶಿವಮೊಗ್ಗ ಪೊಲೀಸ್ ಇಲಾಖೆಯ ಕೆಲ ಸಿಬ್ಬಂಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷ್ಯ ಎನ್ನಲಾಗುತ್ತಿದೆ. ಸಿಟಿಯಲ್ಲಿ ರೌಡಿ ಚಟುವಟಿಕೆಯನ್ನ ಬಂದ್ ಮಾಡದಿದ್ದರೇ ಇಂತಹ ಶಾಂತಿಭಂಗ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಮಲೆನಾಡು ಟುಡೆ ಸ್ಥಳೀಯರನ್ನ ವಿಚಾರಿಸಿದಾಗ ತಿಳಿದುಬಂದಿದ್ದು ಇಷ್ಟು. ಶಿವಮೊಗ್ಗದ ಹರಿಗೆ ರಿಟೈರ್ಡ್ ಕಾಲೊನಿಯ 3ನೇ ಕ್ರಾಸ್‌ನಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ರಘು ಎಂಬುವವರ ಮನೆಯ ಎದುರು ಕೆಲ ಯುವಕರು ಪಟಾಕಿ ಸಿಡಿಸುತ್ತಿದ್ದರು. ಮನೆಯಲ್ಲಿ ಚಿಕ್ಕ ಮಕ್ಕಳಿರುವುದರಿಂದ ಪಟಾಕಿ ಹೊಡೆಯಬೇಡಿ ಎಂದು ರಘು ಯುವಕರಿಗೆ ಬುದ್ಧಿವಾದ ಹೇಳಿದ್ದಾರೆ. ಇದಕ್ಕೆ ಕಿರಿಕ್ ಮಾಡಿದ ಯುವಕರು ರಾಕೆಟ್ ಪಟಾಕಿಯನ್ನು ಹಚ್ಚಿ ರಘು ಅವರ ಮನೆಯತ್ತ ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ರಾಕೆಟ್ ರಘು ಅವರ ಮನೆಯ ಬದಲಾಗಿ ಪಕ್ಕದಲ್ಲಿರುವ ಸಂಜಯ್ ಎಂಬುವವರ ಮನೆಗೆ ತಗುಲಿದೆ.
ತಮ್ಮ ಮನೆಗೆ ರಾಕೆಟ್ ಪಟಾಕಿ ತಗುಲಿದ ಬಗ್ಗೆ ಸಂಜಯ್ ಪ್ರಶ್ನಿಸಿದಾಗ ಯುವಕರ ಗುಂಪು ಅವರೊಂದಿಗೆ ವಾಗ್ವಾದ ನಡೆಸಿದೆ. ಈ ಘಟನೆಯ ನಂತರವೂ ಯುವಕರು ಪಟಾಕಿ ಸಿಡಿಸುವುದನ್ನು ನಿಲ್ಲಿಸದೆ, ಸ್ಥಳೀಯ ನಿವಾಸಿಗಳಿಗೆ ತೊಂದರೆ ನೀಡುವುದನ್ನು ಮುಂದುವರಿಸಿದ್ದಾರೆ. ಅಲ್ಲದೆ, ಯುವಕರ ಗುಂಪು ಸ್ಥಳೀಯರಿಗೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಇದೇ ಕಾರಣಕ್ಕೆ ಸ್ಥಳೀಯರು ಎಸ್ಪಿ ಕಚೇರಿ ಎದುರು ರಾತೋರಾತ್ರಿ ಹಬ್ಬ ಮಾಡೋದನ್ನ ಬಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಪೊಲೀಸ್ ಇಲಾಖೆಯ ಪರವಾಗಿಡಿವೈಎಸ್ಪಿ ಜನರ ಜೊತೆ ಮಾತನಾಡಿದರಾದರೂ, ಜನರ ಪ್ರಶ್ನೆಗಳಿಗೆ ಉತ್ತರ ಸ್ಪಷ್ಟವಾಗಿ ದೊರಕಲಿಲ್ಲ
