ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದಸರಾ ಮತ್ತು ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯಶವಂತಪುರದಿಂದ ಶಿವಮೊಗ್ಗ ಟೌನ್ವರೆಗೆ ಸಂಚರಿಸುವ ಯಶವಂತಪುರ–ಶಿವಮೊಗ್ಗ ಎಕ್ಸ್ಪ್ರೆಸ್ ರೈಲುನ್ನು ತಾತ್ಕಾಲಿಕವಾಗಿ ತಾಳಗುಪ್ಪದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 18ರಿಂದ ನವೆಂಬರ್ 12ರವರೆಗಿನ ನಿಗದಿತ ದಿನಗಳಲ್ಲಿ ಉಭಯ ದಿಕ್ಕುಗಳಲ್ಲಿ ತಲಾ 11 ಟ್ರಿಪ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಸಂಬಂಧ ಅಕ್ಟೋಬರ್ 14ರಂದು ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ರೈಲು ಸಂಖ್ಯೆ 16581/16582 ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ತ್ರಿಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಿಸುವುದಾಗಿ ತಿಳಿಸಿದೆ. ಪ್ರಸ್ತುತ ಇರುವ ಬೋಗಿಗಳ ಸಂಯೋಜನೆ ಹಾಗೂ ರೈಲು ಸಂಚರಿಸುವ ದಿನಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಈ ತಾತ್ಕಾಲಿಕ ವಿಸ್ತರಣೆಯನ್ನು ಜಾರಿಗೊಳಿಸಲಾಗುತ್ತಿದೆ.
ಯಶವಂತಪುರದಿಂದ ಮಧ್ಯರಾತ್ರಿ 12:15ಕ್ಕೆ ಹೊರಡುವ ರೈಲು
- ರೈಲು ಸಂಖ್ಯೆ 16581 ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ರೈಲು ಯಶವಂತಪುರದಿಂದ ಮಧ್ಯರಾತ್ರಿ 12:15ಕ್ಕೆ ಹೊರಟು, ಅದೇ ದಿನ ಬೆಳಗ್ಗೆ 9:00 ಗಂಟೆಗೆ ತಾಳಗುಪ್ಪ ತಲುಪಲಿದೆ.
- ಮರಳಿ ಪ್ರಯಾಣಿಸುವ ರೈಲು ಸಂಖ್ಯೆ 16582 ತಾಳಗುಪ್ಪದಿಂದ ರಾತ್ರಿ 10:00 ಗಂಟೆಗೆ ಹೊರಡಲಿದೆ. ಈ ರೈಲು ಯಶವಂತಪುರವನ್ನು ಈಗಾಗಲೇ ನಿಗದಿಪಡಿಸಿರುವ ವೇಳಾಪಟ್ಟಿಯ ಪ್ರಕಾರ ತಲುಪಲಿದೆ.
- ಯಶವಂತಪುರದಿಂದ ಶಿವಮೊಗ್ಗ ಟೌನ್ವರೆಗಿನ ರೈಲು ಸಂಚಾರದ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
- ಶಿವಮೊಗ್ಗ ಟೌನ್ನಿಂದ ತಾಳಗುಪ್ಪದವರೆಗೆ ವಿಸ್ತರಿಸಲಾದ ಮಾರ್ಗದಲ್ಲಿ ಕೊಂಗವಳ್ಳಿ, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಳು, ಆನಂದಪುರಂ, ಅಡ್ಡೇರಿ ಹಾಗೂ ಸಾಗರ ಜಂಬಗಾರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ.
- ಈ ಎಲ್ಲಾ ನಿಲ್ದಾಣಗಳಲ್ಲಿ ರೈಲು ಉಭಯ ದಿಕ್ಕುಗಳಲ್ಲಿ ನಿಲುಗಡೆಯಾಗಲಿದೆ. ಅಕ್ಟೋಬರ್ 18ರಿಂದ ನವೆಂಬರ್ 12ರವರೆಗಿನ ಅವಧಿಯಲ್ಲಿ ನಿಗದಿತ ದಿನಗಳಂದು ತಲಾ 11 ಟ್ರಿಪ್ಗಳಂತೆ ರೈಲು ಸಂಚರಿಸಲಿದೆ.
ಅಕ್ಟೋಬರ್ 16ರಿಂದ 10 ರೈಲುಗಳ ಸಂಚಾರ ಮಾರ್ಗ ಬದಲಾವಣೆ
ಇದೇ ವೇಳೆ ಬೆಂಗಳೂರು ರೈಲ್ವೆ ವಿಭಾಗದ ಪೆನುಕೊಂಡ–ನಾಗಸಮುದ್ರಂ–ಧರ್ಮಾವರಂ ವಿಭಾಗದಲ್ಲಿ ರೈಲು ಮಾರ್ಗ ದ್ವಿಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 10 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
ಅಕ್ಟೋಬರ್ 16ರಿಂದ ಈ ಮಾರ್ಗ ಬದಲಾವಣೆ ಜಾರಿಗೆ ಬರಲಿದ್ದು, ಪೆನುಕೊಂಡ–ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ–ಧರ್ಮಾವರಂ ಮಾರ್ಗದ ಬದಲಾಗಿ ಪೆನುಕೊಂಡ–ನಾಗಸಮುದ್ರಂ–ಧರ್ಮಾವರಂ ಮಾರ್ಗದ ಮೂಲಕ ಈ ರೈಲುಗಳು ಸಂಚರಿಸಲಿವೆ.
ಮಾರ್ಗ ಬದಲಾವಣೆಗೆ ಒಳಪಡುವ ರೈಲುಗಳಲ್ಲಿ ರೈಲು ಸಂಖ್ಯೆ 22884 ಯಶವಂತಪುರ–ಪುರಿ ಸಾಪ್ತಾಹಿಕ ಗರೀಬ್ ರಥ್ ಎಕ್ಸ್ಪ್ರೆಸ್, ರೈಲು ಸಂಖ್ಯೆ 22683 ಯಶವಂತಪುರ–ಲಖನೌ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಹಾಗೂ ರೈಲು ಸಂಖ್ಯೆ 12251 ಯಶವಂತಪುರ–ಕೊರ್ಬಾ ದ್ವಿಸಾಪ್ತಾಹಿಕ ವೈಗಂಗಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ಸೇರಿವೆ.
ಇವುಗಳೊಂದಿಗೆ ರೈಲು ಸಂಖ್ಯೆ 15024 ಯಶವಂತಪುರ–ಗೋರಖ್ಪುರ ಸಾಪ್ತಾಹಿಕ ಎಕ್ಸ್ಪ್ರೆಸ್, ರೈಲು ಸಂಖ್ಯೆ 12647 ಕೊಯಮತ್ತೂರು–ಹಜರತ್ ನಿಜಾಮುದ್ದೀನ್ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್, ರೈಲು ಸಂಖ್ಯೆ 16577 ಯಶವಂತಪುರ–ಬೀದರ್ ಸಾಪ್ತಾಹಿಕ ಎಕ್ಸ್ಪ್ರೆಸ್ ಹಾಗೂ ರೈಲು ಸಂಖ್ಯೆ 16578 ಬೀದರ್–ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಮಾರ್ಗವೂ ಬದಲಾಗಲಿದೆ.
ಇದಲ್ಲದೆ ರೈಲು ಸಂಖ್ಯೆ 11086 ಗ್ವಾಲಿಯರ್–ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್, ರೈಲು ಸಂಖ್ಯೆ 16531 ಅಜ್ಮೀರ್–ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ಮತ್ತು ರೈಲು ಸಂಖ್ಯೆ 16533 ಜೋಧಪುರ–ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳು ಪರ್ಯಾಯ ಮಾರ್ಗದ ಮೂಲಕ ಸಂಚರಿಸಲಿವೆ.
ಯಶವಂತಪುರ–ಶಿವಮೊಗ್ಗ ಎಕ್ಸ್ಪ್ರೆಸ್ ರೈಲಿನ ತಾಳಗುಪ್ಪದವರೆಗಿನ ತಾತ್ಕಾಲಿಕ ವಿಸ್ತರಣೆ ಹಾಗೂ 10 ರೈಲುಗಳ ಮಾರ್ಗ ಬದಲಾವಣೆ ಕುರಿತು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
