ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಸಾವಿಗೆ ಸಾವಿರ ದಾರಿ ಎನ್ನುವ ಮಾತಿದೆ. ಮನುಷ್ಯ ತನ್ನ ಮುಂದಿನ ಕ್ಷಣದ ಬಗ್ಗೆ ಏನೇನೋ ಕನಸುಗಳನ್ನು ಕಾಣುತ್ತಾನೆ, ಲೆಕ್ಕಾಚಾರಗಳನ್ನು ಹಾಕುತ್ತಾನೆ. ಆದರೆ, ವಿಧಿ ಆತನ ಆಯಸ್ಸಿನ ಗೆರೆಯನ್ನು ಎಲ್ಲಿ, ಹೇಗೆ, ಯಾವ ರೂಪದಲ್ಲಿ ಎಳೆದಿರುತ್ತದೆ ಎಂಬುದು ಯಾರಿಗೂ ತಿಳಿಯದ ನಿಗೂಢ ರಹಸ್ಯ.
ಸಾವು ಯಾವತ್ತೂ ಮುನ್ಸೂಚನೆ ನೀಡಿ ಬರುವುದಿಲ್ಲ. ಅದು ಯಾವ ರೂಪದಲ್ಲಿ, ಯಾವ ದಿಕ್ಕಿನಿಂದ ಅಪ್ಪಳಿಸುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ರಸ್ತೆಯಲ್ಲಿ ಸುಗಮವಾಗಿ ಸಾಗುತ್ತಿರುವಾಗಲೋ, ಮನೆಯಲ್ಲಿ ಕುಳಿತಾಗಲೋ, ಅಥವಾ ನಿರೀಕ್ಷಿಸದ ಯಾವುದೋ ಒಂದು ರೂಪದಲ್ಲಿ ಸಾವು ಆವರಿಸಿಕೊಳ್ಳಬಹುದು. ಸಾವೆಂದರೇನೆ ಹಾಗೆ ನಿಗೂಢ..
ಸಾವಿಗೆ ಸಾವಿರ ದಾರಿ ಎನ್ನುವುದು ಇದೇನಾ?
ಇಂತಹ ನಂಬಲಸಾಧ್ಯವಾದ ಮತ್ತು ಅಷ್ಟೇ ಅನಿರೀಕ್ಷಿತವಾದ ಸಾವೊಂದು ತೀರ್ಥಹಳ್ಳಿ ತಾಲೂಕಿನಲ್ಲಿ ಸಂಭವಿಸಿದೆ. ದಿನನಿತ್ಯದಂತೆ ತನ್ನ ಕಾಯಕ ಮುಗಿಸಿ, ತಾನು ಪಟ್ಟ ಶ್ರಮದ ದುಡಿಮೆಯನ್ನು ಜೇಬಿಗಿಳಿಸಿಕೊಂಡು ಮನೆಗೆ ಮರಳುತ್ತಿದ್ದ ಕಾರ್ಮಿಕನೊಬ್ಬನ ಮೇಲೆ ಮೃತ್ಯು ಅಡಿಕೆ ಮರದ ರೂಪದಲ್ಲಿ ಎರಗಿದೆ. ಇದು ಸಾವು ಎದುರಾಗುವ ಅನಿರೀಕ್ಷಿತ ಪರಿಯನ್ನು ಮತ್ತು ಬದುಕಿನ ನಶ್ವರತೆಯನ್ನು ಸಾರಿ ಹೇಳುತ್ತಿದೆ.
ಇಲ್ಲಿನ ಗಾಂಧಿನಗರ ನಿವಾಸಿ 61 ವರ್ಷದ ಮಾಯಕಣ್ಣನ್ ವೃತ್ತಿಯಲ್ಲಿ ಕಲ್ಲು ಕಾರ್ಮಿಕರು. ತೀರ್ಥಹಳ್ಳಿ ಸಮೀಪದ ಕಲ್ಲತ್ತಿ ಎಂಬಲ್ಲಿನ ಮನೆಯೊಂದಕ್ಕೆ ತಾವು ಪೂರೈಸಿದ್ದ ಕಲ್ಲಿನ ಹಣವನ್ನು ಪಡೆಯಲು ಅವರು ಅಲ್ಲಿಗೆ ಹೋಗಿದ್ದರು. ಅಲ್ಲದೆ ಅಲ್ಲಿ ಹಣ ಪಡೆದು ಬೈಕಲ್ಲಿ ಮತ್ತೆ ತಮ್ಮ ಮನೆಯತ್ತ ಹೋಗುತ್ತಿದ್ದವರು. ಆದರೆ ಈ ಪಯಣವೇ ತಮ್ಮ ಬದುಕಿನ ಕಡೆಯ ಪಯಣವಾಗಲಿದೆ, ತಾವು ಸಾಗುತ್ತಿರುವ ಹಾದಿಯಲ್ಲೇ ಸಾವು ಕಾದು ಕುಳಿತಿದೆ ಎಂಬ ಸಣ್ಣ ಸುಳಿವು ಕೂಡ ಅವರಿಗೆ ಇರಲಿಲ್ಲ.
ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಸರ ಮತ್ತು ಬಾಳಗಾರು ಸಂಪರ್ಕಿಸುವ ರಸ್ತೆಯ ಮಾರ್ಗದಲ್ಲಿ ಮಾಯಕಣ್ಣನ್ ಸಾಗುತ್ತಿರುವಾಗ ಸಾವು ಅವರಿಗೆ ಎದುರಾಗಿದೆ. ಇವರು ರಸ್ತೆಯಲ್ಲಿ ಸಾಗಿ ಬರುತ್ತಿರುವ ಹೊತ್ತಿಗೆ ಅಲ್ಲಿಯೇ ಅಬ್ಬಿಗದ್ದೆಯ ತೋಟವೊಂದರಲ್ಲಿ ಒಣಗಿದ ಅಡಕೆ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಮಿಕರು ತೋಟದಲ್ಲಿ ಒಣಗಿದ ಮತ್ತು ಹಳೆಯದಾದ ಅಡಕೆ ಮರಗಳನ್ನು ಕಡಿಯುತ್ತಿದ್ದರು. ಹೀಗೆ ಕಡಿಯುತ್ತಿರುವ ಒಂದು ಒಣಗಿದ ಅಡಕೆ ಸೀದಾ ರಸ್ತೆ ಬದಿಗೆ ಮುಖಮಾಡಿಕೊಂಡು ಬಿದ್ದಿದೆ. ಅದೇ ಹೊತ್ತಿಗೆ ಮಾಯಕಣ್ಣನ್ ಅಲ್ಲಿಗೆ ಬಂದಿದ್ದಾರೆ.
ಕಾಲದ ಲೆಕ್ಕಾಚಾರ ಎಷ್ಟು ನಿಖರ ಮತ್ತು ಕ್ರೂರವಾಗಿರುತ್ತದೆ ಎಂದರೆ, ಒಂದು ಸೆಕೆಂಡ್ ಮುಂಚೆ ಅಥವಾ ಒಂದು ಸೆಕೆಂಡ್ ತಡವಾಗಿ ಅವರು ಆ ಜಾಗವನ್ನು ದಾಟಿದ್ದರೆ ಬಹುಶಃ ಅವರ ಪ್ರಾಣ ಉಳಿಯುತ್ತಿತ್ತೇನೋ. ಆದರೆ, ರಸ್ತೆಗೆ ವಾಲಿದ ಅಡಕೆ ಮರ ನೇರವಾಗಿ ಮಾಯಕಣ್ಣನ್ ತಲೆಯ ಮೇಲೆಯೇ ಬಿದ್ದಿದೆ. ಅಡಕೆ ಮರ ಬಿದ್ದ ರಭಸ ಮತ್ತು ಅದರ ಹೊಡೆತಕ್ಕೆ ಮಾಯಕಣ್ಣನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
ಬದುಕಿನ ಓಟದಲ್ಲಿ ಮನುಷ್ಯ ಪ್ರತಿದಿನವೂ ಒಂದಲ್ಲ ಒಂದು ಗುರಿಯತ್ತ ಸಾಗುತ್ತಲೇ ಇರುತ್ತಾನೆ. ಮುಂಜಾನೆ ಎದ್ದು ಕೆಲಸಕ್ಕೆ ಹೋಗುವಾಗ ಸಂಜೆಯ ಹೊತ್ತಿಗೆ ಮತ್ತೆ ತನ್ನ ಗೂಡಿಗೆ ಮರಳುವ ದೃಢವಾದ ನಂಬಿಕೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ನಂಬಿಕೆಯ ಮೇಲೆಯೇ ಇಡೀ ಜಗತ್ತು ನಿಂತಿದೆ. ಆದರೆ, ಆ ನಂಬಿಕೆಯನ್ನು ಹುಸಿಯಾಗಿಸುವ ಶಕ್ತಿ ಯಾವುದು ಗೊತ್ತಿಲ್ಲ. ಆದರೆ ಪ್ರತಿದಿನ ಕಾಣುವ ಇಂತಹ ಸಾವುಗಳು ಮಾತ್ರ ಸಾವನ್ನ ನಿಕ್ಕಿಗೊಳಿಸಲು ಯಾವುದೋ ಶಕ್ತಿ ಏನೆಲ್ಲಾ ದಾರಿ ಹುಡುಕುತ್ತೆ ಎಂದನಿಸುತ್ತದೆ. ಇಂತಹ ಘಟನೆಗಳನ್ನು ನೋಡಿದಾಗ, ನಾವು ಬದುಕುತ್ತಿರುವ ಪ್ರತಿಯೊಂದು ಕ್ಷಣವೂ ಕೇವಲ ಒಂದು ಆಕಸ್ಮಿಕ ಎನಿಸದಿರದು.
ಅಬ್ಬಿಗದ್ದೆಯ ತೋಟದಲ್ಲಿ ಮರ ಕಡಿಯುತ್ತಿದ್ದ ಕಾರ್ಮಿಕರಿಗೂ ತಾವು ಕಡಿಯುತ್ತಿರುವ ಮರ ರಸ್ತೆಯಲ್ಲಿ ಹೋಗುವ ಅಮಾಯಕ ಜೀವವೊಂದನ್ನು ಬಲಿಪಡೆಯುತ್ತದೆ ಎಂಬ ಕಲ್ಪನೆ ಖಂಡಿತಾ ಇರಲಿಲ್ಲ. ಅದೊಂದು ಅಚಾತುರ್ಯ, ನಿರ್ಲಕ್ಷ್ಯ ಅಥವಾ ಕೇವಲ ಒಂದು ದುರದೃಷ್ಟಕರ ಕಾಕತಾಳೀಯ. ಆದರೆ, ಈ ಕಾಕತಾಳೀಯದ ಬೆಲೆ ಮಾತ್ರ ಒಬ್ಬನ ಅಮೂಲ್ಯವಾದ ಪ್ರಾಣ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
