ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎಚ್. ಮೊಹಮ್ಮದ್ ಶಾರೀಖ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಅಲ್ಲದೆ 94 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಶಾರೀಖ್ ತನ್ನ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿದ್ದ.
ಶಿವಮೊಗ್ಗ ಜೈಲಿಗಿಲ್ಲ ವರ್ಗಾವಣೆ
ವಿಶೇಷ ಅಂದರೆ, ಶಿಕ್ಷೆ ಪ್ರಕಟವಾದ ಬಳಿಕ, ತಾನು ಕಳೆದ 3 ವರ್ಷಗಳಿಂದ ಜೈಲಿನಲ್ಲಿದ್ದು, ಅನಾರೋಗ್ಯದ ಕಾರಣ ಔಷಧ ಪಡೆಯಲು ಕಷ್ಟವಾಗುತ್ತಿದೆ, ಹೀಗಾಗಿ ತನ್ನನ್ನು ಬೆಂಗಳೂರಿನಿಂದ ಶಿವಮೊಗ್ಗ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಧೀಶರ ಮುಂದೆ ಕೋರಿಕೊಂಡಿದ್ದ. ಆದರೆ, ಬೆಂಗಳೂರಿನಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿದ್ದು, ಶಿವಮೊಗ್ಗಕ್ಕಿಂತ ಇಲ್ಲಿಯೇ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ ಆತನ ಮನವಿಯನ್ನ ತಿರಸ್ಕರಿಸಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ರೂವಾರಿ ತೀರ್ಥಹಳ್ಳಿಯ ಶಾರೀಖ್
2022ರ ನವೆಂಬರ್ 19ರಂದು ಸಂಜೆ 4:40ರ ಸುಮಾರಿಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದ ಬಳಿ ಸ್ಫೋಟಿಸುವ ಮೂಲಕ ಕೋಮು ಗಲಭೆ ಸೃಷ್ಟಿಸುವ ಉದ್ದೇಶವನ್ನು ಈತ ಹೊಂದಿದ್ದನು ಎಂಬ ಅಂಶ ರಾಷ್ಟ್ರೀಯ ತನಿಖಾ ದಳದ ವಿಚಾರಣೆ ವೇಳೆ ಬಹಿರಂಗವಾಗಿತ್ತು.
ಟೈಮರ್ ಅನ್ನು ತಪ್ಪಾಗಿ ಅಳವಡಿಸಿದ್ದರಿಂದ, ನಿಗದಿತ ಗುರಿ ತಲುಪುವ ಮುನ್ನವೇ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಆರೋಪಿ ಶಾರೀಖ್ ಸೇರಿದಂತೆ ಮುಗ್ಧ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ತೀರ್ಥಹಳ್ಳಿಯ ಶಾರೀಖ್
ಸುಮಾರು 2.5 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಎನ್‌ಐಎ ಅಧಿಕಾರಿಗಳು ಶಾರೀಖ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ, ಬಟ್ಟೆ ವ್ಯಾಪಾರಿಯೊಬ್ಬರ ಮಗ ಶಾರೀಖ್, ಬಿ.ಕಾಂ ಪದವಿಧರ
ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ತೀರ್ಥಹಳ್ಳಿಯ ಶಾರೀಖ್ ಡಾರ್ಕ್ ವೆಬ್ ಮೂಲಕ ಕರ್ನಲ್ ಎಂಬಾತನ ಸಂಪರ್ಕ ಬೆಳೆಸಿದ್ದ . ಆನ್‌ಲೈನ್ ಹ್ಯಾಂಡ್ಲರ್ ಆಗಿದ್ದ ಕರ್ನಲ್, ಎಂಇಎಕ್ಸ್‌ಸಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ಒದಗಿಸುತ್ತಿದ್ದ. ಸರಳ್ ದೇವಿ ಹಾಗೂ ಪಿಂಕಿ ಬಾಯಿ ಅಹಿರ್ವಾರ್ ಎಂಬ ನಕಲಿ ಹೆಸರುಗಳಲ್ಲಿ ಫಿನೋ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದು ಎಟಿಎಂ ಕಾರ್ಡ್‌ಗಳನ್ನು ಬಳಸುತ್ತಿದ್ದ.
ತನ್ನ ಸಹಚರರಾದ ಮಾಝ್ ಮುನೀರ್ ಅಹ್ಮದ್ ಹಾಗೂ ಸೈಯದ್ ಯಾಸಿನ್ ಜೊತೆಗೂಡಿ ಶಿವಮೊಗ್ಗದಲ್ಲಿ ಐಸಿಸ್ ಮಾಡ್ಯೂಲ್ ನಿರ್ವಹಿಸುತ್ತಿದ್ದ ಈ ಶಾರೀಖ್. 2020ರಲ್ಲಿ ಮಂಗಳೂರಿನಲ್ಲಿ ಲಷ್ಕರ್-ಎ-ತೊಯ್ಬಾ ಜಿಂದಾಬಾದ್ ಎಂದು ಗೋಡೆಬರಹ ಬರೆದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಶಾರೀಖ್ ಆನಂತರ 2022ರ ಸೆಪ್ಟೆಂಬರ್ ತಿಂಗಳಲ್ಲಿ ಶಿವಮೊಗ್ಗದ ತುಂಗಾ ನದಿ ದಡದಲ್ಲಿ ಟ್ರಯಲ್ ಬ್ಲಾಸ್ಟ್ ಕೇಸ್ನ ಆರೋಪಿಯಾಗಿದ್ದ.
ಶಿವಮೊಗ್ಗದ ಎಸ್ಪಿಯಾಗಿದ್ದ ಲಕ್ಷ್ಮೀಪ್ರಸಾದ್ ನೇತೃತ್ವದ ವಿಶೇಷ ತಂಡ ಟ್ರಯಲ್ ಬ್ಲಾಸ್ಟ್ ಪ್ರಕರಣವನ್ನು ಭೇದಿಸಿದ ಬೆನ್ನಲ್ಲೆ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ, ಬೆಂಗಳೂರಿನ ರಾಮೇಶ್ವರಂ ಕಫೆ ಬ್ಲಾಸ್ಟ್ ಕೇಸ್ಗಳು ನಡೆದಿದ್ದವು. ಈ ನಡುವೆ ಕೇಸ್ ಎನ್‌ಐಎ ವರ್ಗಾವಣೆಯಾಗಿತ್ತು.
ಎನ್‌ಐಎ ವಿಶೇಷ ನ್ಯಾಯಾಲಯ
ಸುದೀರ್ಘ ತನಿಖೆಯ ನಂತರ ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2024ರ ಏಪ್ರಿಲ್ 20ರಂದು ನ್ಯಾಯಾಲಯವು ಆರೋಪಿಗಳ ಮೇಲೆ ಚಾರ್ಜ್ ಫೈಲ್ ಮಾಡಿತ್ತು. ಆ ಸಂದರ್ಭದಲ್ಲಿ ಆರೋಪಗಳನ್ನು ನಿರಾಕರಿಸಿದ್ದ ಶಾರೀಖ್, ಡಿಸೆಂಬರ್ 2025ರಲ್ಲಿ ಸಿಆರ್‌ಪಿಸಿ 229 ಕಾಯ್ದೆಯಡಿ ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಸಿದ್ದ
ಕುಕ್ಕರ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ಇರಿಸಿ ಸ್ಫೋಟಿಸಿರುವುದು ನಿಜ ಹಾಗೂ ತನ್ನ ಕೃತ್ಯಕ್ಕೆ ಪಶ್ಚಾತ್ತಾಪವಿದೆ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದನು. 2026ರ ಮಾರ್ಚ್ 26ರಂದು ಈ ತಪ್ಪೊಪ್ಪಿಗೆಯನ್ನು ಅಂಗೀಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯವ ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw