ಮೃತ ಸಿಬ್ಬಂದಿ ಕುಟುಂಬಕ್ಕೆ 1.08 ಕೋಟಿಯ ಚೆಕ್ ನೀಡಿದ ಎಸ್​ಪಿ ನಿಖಿಲ್​! ಇಲ್ಲೊಂದು ಸಂದೇಶವಿದೆ!

ಹಂಚಿಕೊಳ್ಳಿ
WhatsApp Facebook X Telegram
SP B Nikhil urges police staff to utilize salary package and life insurance schemes
SP B Nikhil urges police staff to utilize salary package and life insurance schemes

life insurance schemes / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹಗಲಿರುಳು ಎನ್ನದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಯು ಭವಿಷ್ಯದ ದೃಷ್ಟಿಯಿಂದ ವಿಮಾ ಸೌಲಭ್ಯಗಳನ್ನು ಹೊಂದುವುದು ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ.

ತಮ್ಮ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ಎರಡು ತಿಂಗಳ ಹಿಂದೆ ಶಿರಾಳಕೊಪ್ಪದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಆನವಟ್ಟಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಬಸವರಾಜು ಅವರ ಕುಟುಂಬಕ್ಕೆ ಪರಿಹಾರ ವಿತರಿಸಿ ಅವರು ಮಾತನಾಡಿದರು. ಬಸವರಾಜು ಅವರು ಹೊಂದಿದ್ದ ಬ್ಯಾಂಕ್ ಆಫ್ ಬರೋಡಾದ ಸ್ಯಾಲರಿ ಪ್ಯಾಕೇಜ್ ಸ್ಕೀಂ ಸೌಲಭ್ಯ ಹಾಗೂ ವಿಮಾ ಮೊತ್ತ ಸೇರಿದಂತೆ ಒಟ್ಟು 1.08 ಕೋಟಿ ರೂಪಾಯಿಗಳ ಚೆಕ್ಕನ್ನು ಅವರ ಕುಟುಂಬಕ್ಕೆ ಎಸ್ಪಿ ಅವರು ಹಸ್ತಾಂತರಿಸಿದರು.

ಯಾವುದೇ ನೌಕರರ ಕುಟುಂಬದಲ್ಲಿ ಇಂತಹ ಅಹಿತಕರ ಹಾಗೂ ಆಕಸ್ಮಿಕ ಘಟನೆಗಳು ನಡೆಯಬಾರದು, ಆದರೆ ದುರದೃಷ್ಟವಶಾತ್ ಇಂತಹ ಅಪಘಾತ ಸಂಭವಿಸಿದಾಗ ಆ ಕುಟುಂಬಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಬಿ. ನಿಖಿಲ್ ಅವರು ಬೇಸರ ವ್ಯಕ್ತಪಡಿಸಿದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಟುಂಬದ ಪೋಷಕರು, ಪತ್ನಿ ಹಾಗೂ ಮಕ್ಕಳ ಭವಿಷ್ಯಕ್ಕೆ ಆಸರೆ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರತಿಯೊಬ್ಬ ನೌಕರನೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ಕಲ್ಪಿಸಿರುವ ಸ್ಯಾಲರಿ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳುವುದು ಸೂಕ್ತ. ಇದರಿಂದ ನೊಂದ ಕುಟುಂಬಕ್ಕೆ ಸ್ವಲ್ಪ ಮಟ್ಟಿನ ಆರ್ಥಿಕ ಸಮಾಧಾನ ದೊರೆಯುವುದರ ಜೊತೆಗೆ, ಅವರ ಮುಂದಿನ ಬದುಕಿಗೆ ಇದೊಂದು ಸಂಜೀವಿನಿಯಾಗಿ ನೆರವಾಗಲಿದೆ ಎಂದು ಅವರು ವಿವರಿಸಿದರು.

ಇದೇ ವೇಳೆ ರಾಜ್ಯ ಸರ್ಕಾರದ ಎಲ್ಲಾ ನೌಕರರು ಹಾಗೂ ಅಧಿಕಾರಿಗಳು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಕಡ್ಡಾಯವಾಗಿ ಸ್ಯಾಲರಿ ಪ್ಯಾಕೇಜ್ ಖಾತೆಗಳನ್ನು ತೆರೆಯುವಂತೆ ಆರ್ಥಿಕ ಇಲಾಖೆಯು ಸೂಚನೆ ನೀಡಿದೆ. ಈ ಯೋಜನೆಯಡಿ ಶೂನ್ಯ ಬ್ಯಾಲೆನ್ಸ್ ಖಾತೆ, ಅಪಘಾತ ವಿಮೆ, ಕಡಿಮೆ ಪ್ರೀಮಿಯಂನಲ್ಲಿ ಜೀವವಿಮೆ, ಸಾಲದ ಮೇಲಿನ ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು ಪ್ರಕಟಣೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ನೌಕರರ ಹಿತರಕ್ಷಣೆಗಾಗಿ ಸಂಘವು ನಡೆಸಿದ ನಿರಂತರ ಯತ್ನಕ್ಕೆ ಜಯ ಸಿಕ್ಕಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೃತ ಎಎಸ್‌ಐ ಬಸವರಾಜು ಅವರ ಪುತ್ರಿ ಕುಮಾರಿ ಯಶಸ್ವಿನಿ, ತಂದೆ ಬದುಕಿದ್ದಾಗ ಜೀವನದ ಕಷ್ಟಗಳು ನಮಗೆ ಅರಿವಿಗೆ ಬಂದಿರಲಿಲ್ಲ. ಅವರ ದಿಢೀರ್ ನಿಧನದಿಂದ ನಮ್ಮ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಮುಂದೇನು ಎಂಬ ಪ್ರಶ್ನೆ ಎದುರಾಗಿ ದಿಕ್ಕೇ ತೋಚದಂತಾದ ಸ್ಥಿತಿಯಲ್ಲಿ, ತಂದೆಯವರ ವೃತ್ತಿ ಬಾಂಧವರು ಹಾಗೂ ಹಿರಿಯ ಅಧಿಕಾರಿಗಳು ಸ್ಯಾಲರಿ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದರು.

ಎರಡು ತಿಂಗಳ ಹಿಂದೆಯಷ್ಟೇ ತಂದೆ ಮಾಡಿಸಿದ್ದ ಸ್ಯಾಲರಿ ಪ್ಯಾಕೇಜ್ ಮತ್ತು ವಿಮೆಯಿಂದಾಗಿ ಇಂದು 1.08 ಕೋಟಿ ರೂಪಾಯಿ ಪರಿಹಾರ ದೊರೆತಿದೆ. ಎಲ್ಲವೂ ಮುಗಿದೇ ಹೋಯಿತು ಎಂದು ಭಾವಿಸಿದ್ದ ನಮ್ಮ ಕುಟುಂಬಕ್ಕೆ ಇದೀಗ ಹೊಸ ದಾರಿ ಸಿಕ್ಕಂತಾಗಿದೆ. ಈ ಸೌಲಭ್ಯವನ್ನು ತ್ವರಿತವಾಗಿ ಒದಗಿಸಿಕೊಟ್ಟ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ತಾವು ಸದಾ ಆಭಾರಿಯಾಗಿರುತ್ತೇವೆ ಎಂದು ಕಣ್ಣೀರು ತುಂಬಿಕೊಂಡು ನುಡಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ, ಬ್ಯಾಂಕ್ ಆಫ್ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್ ಎನ್. ಸಹಕಾರ್, ಪ್ರಧಾನ ವ್ಯವಸ್ಥಾಪಕ ದೀರಜ್ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್ ಜಿ. ಕೆ., ಶಾಖಾ ವ್ಯವಸ್ಥಾಪಕ ಬಷೀರ್ ಹುಡೇದ್ ಸೇರಿದಂತೆ ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor