Shivamogga Traffic Diversion ಶಿವಮೊಗ್ಗ: ರಾಜ್ಯ ಹೆದ್ದಾರಿ ರಸ್ತೆಯ ಸರಪಳಿ 191.000 ರಿಂದ 191.230 ರ ನಡುವಿನ ಫ್ಲೈ ಓವರ್ ಇಳಿಜಾರು ಮತ್ತು ಕೂಡು ರಸ್ತೆಯ ಜಾಗದಲ್ಲಿ ರಸ್ತೆಯು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ, ಆ ಮಾರ್ಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಈ ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಮತ್ತು ಭಾರೀ ವಾಹನಗಳ ಓಡಾಟದಿಂದಾಗಿ ರಸ್ತೆ ಹಾಳಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದ ಕಾರಣ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.ಫ್ಲೈ ಓವರ್ ಇಳಿಜಾರು ಮುಕ್ತಾಯವಾಗುವ ಸ್ಥಳದಿಂದ ಮತ್ತು ಚತುಷ್ಪಥಕ್ಕೆ ಕೂಡುವ ರಸ್ತೆಯ ಜಾಗದವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಈ ಕೆಳಗಿನಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ
Shivamogga Traffic Diversion ಬದಲಾದ ಸಂಚಾರ ಮಾರ್ಗಗಳ ವಿವರ
ಶಿವಮೊಗ್ಗದಿಂದ ಹೊನ್ನಾಳಿ-ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ನಗರದಿಂದ ಎಸ್‌ಎಚ್-57 (ಸವಳಂಗ ರಸ್ತೆ) ಮೂಲಕ ಸಾಗಿ, ಉಷಾ ನರ್ಸಿಂಗ್ ಹೋಮ್ ಮತ್ತು ಜೆಎಸ್‌ಎಸ್‌ಸಿ ಕಾಲೇಜ್ ಬಳಿ ಬಲಕ್ಕೆ ತಿರುಗಿ, ಕುವೆಂಪು ನಗರ ಮತ್ತು ಶಾಂತಿನಗರದ ಮಾರ್ಗವಾಗಿ ಹಾದು, ರಾಜ್ಯ ಹೆದ್ದಾರಿ 25 ಕೂಡುವ ರಸ್ತೆಯನ್ನು ಅನುಸರಿಸಬೇಕು.
ಹೊನ್ನಾಳಿಯಿಂದ-ಶಿವಮೊಗ್ಗ-ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ರಾಜ್ಯ ಹೆದ್ದಾರಿ 25 ರ ಶಾಂತಿನಗರ ಕ್ರಾಸ್ ಬಳಿಯಿಂದ ಶಾಂತಿನಗರ ಸರ್ಕಲ್‌ನಿಂದ ಎಡಕ್ಕೆ ತಿರುಗಿ, ರಾಗಿಗುಡ್ಡ ರಸ್ತೆಯಿಂದ ಕೆಎಸ್‌ಸಿಎ ಸ್ಟೇಡಿಯಮ್ ಬಳಿಯ ಎಸ್‌ಎಚ್-57 (ಉಷಾ ನರ್ಸಿಂಗ್ ಹೋಮ್) ಮಾರ್ಗವಾಗಿ ಸಾಗಿ, ಶಿವಮೊಗ್ಗ ನಗರಕ್ಕೆ ಸೇರುವ ರಸ್ತೆಯನ್ನು ಬಳಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಮತ್ತು ವಾಹನ ಚಾಲಕರು ರಸ್ತೆ ದುರಸ್ತಿ ಕಾರ್ಯಕ್ಕೆ ಸಹಕರಿಸಬೇಕು ಮತ್ತು ಸೂಚಿಸಲಾದ ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

