
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿನ್ನೆ ದಿನ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮುತ್ತಿಗೆ ಹಾಕುತ್ತಾರೆ ಎಂಬ ವಿಚಾರದದ ನಡುವೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದ ಘಟನೆಯೊಂದು ತದನಂತರ ಹೊರಬಿದ್ದಿದೆ.
ಬಿಜೆಪಿ ಮುತ್ತಿಗೆ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಕಚೇರಿಯೊಳಗೆ ಕುಳಿತು, ಬಿಜೆಪಿಯವರಿಗೆ ವಿರುದ್ಧವಾಗಿ ಹೋರಾಟ ನಡೆಸುವುದಾಗಿ ಮಾತನಾಡಿಕೊಂಡಿದ್ದರು. ಆದರೆ ಇದಕ್ಕೆ ಅವಕಾಶ ನೀಡದ ಪೊಲೀಸರು ಕಚೇರಿಯೊಳಗೆ ಕೂರಬೇಡಿ, ಹೊರಡಿ, ಬಿಜೆಪಿಯವರು ಮುತ್ತಿಗೆ ಹಾಕಲು ಅವಕಾಶ ನೀಡುವುದಿಲ್ಲ ಎಂದು ಸೂಚಿಸಿದರು. ಆದರೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ಒಪ್ಪಲಿಲ್ಲ. ಈ ಮಧ್ಯೆ ಪೊಲೀಸರಿಗೂ ಕಾರ್ಯಕರ್ತರಿಗೂ ಜಟಾಪಟಿ ನಡೆಯಿತು.


ಪೊಲೀಸ್ ಇನ್ಸ್ಪೆಕ್ಟರ್ ಬಿಜೆಪಿ ಮುತ್ತಿಗೆ ನಡೆಸುವ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಇರಬಾರದು ಎನ್ನುತ್ತಾ ಕೇಂದ್ರ ಸಚಿವರು ಆಗಮಿಸಿದ್ದ ವೇಳೆ ನಡೆದ ಪ್ರತಿಭಟನೆಯ ವಿಚಾರವನ್ನು ಪ್ರಸ್ತಾಪಿಸಿದರು. ಕೇಂದ್ರ ಸಚಿವರು ಶಿವಮೊಗ್ಗಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪ್ರತಿಭಟನೆ ನಡೆಸದಂತೆ ಮೊದಲೇ ಸೂಚಿಸಲಾಗಿತ್ತು. ಆದರೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ‘ಕೇಂದ್ರ ಸಚಿವರ ಕಾರು ತಡೆಯುವ ಅವಶ್ಯಕತೆ ಏನಿತ್ತು?’ ಮುನ್ನೆಚ್ಚರಿಕೆ ನೀಡಿದ್ದರೂ ಸೂಚನೆ ಪಾಲಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ರು ಅಲ್ಲದೆ ‘ಈಗ ನೋಡಿದರೆ ಕಾಂಗ್ರೆಸ್ ಕಚೇರಿಯಲ್ಲೇ ಇರುತ್ತೇವೆ ಅಂತಿದ್ದೀರಾ. ಬಿಜೆಪಿಯವರನ್ನು ನಾವು ಇಲ್ಲಿಗೆ ಬರಲು ಬಿಡುವುದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ. ‘ನಮ್ಮ ಮಾತನ್ನು ನೀವು ಕೇಳದಿದ್ದರೆ ನಮಗೆ ಗೊತ್ತಿದೆ ಏನು ಮಾಡಬೇಕು ಅಂತ’ ಎಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಇದೇ ಸಂದರ್ಭದಲ್ಲಿ ಮಾತನಾಡಿದ ಸೂಡಾ ಅಧ್ಯಕ್ಷ ಮಧಸೂಧನ್ ರಾಜ್ಯಾಧ್ಯಕ್ಷರ ಆದೇಶದ ಅನ್ವಯ ಕೇಂದ್ರ ಸಚಿವರಿಗೆ ಮುತ್ತಿಗೆ ಹಾಕಿದ್ದೆವು, ಪ್ರತಿಭಟನೆ ಮಾಡುವುದು ಬೇಡ ಎನ್ನುವುದಕ್ಕೆ ಬರುವುದಿಲ್ಲ. ಪ್ರತಿಭಟಿಸಬೇಡಿ ಎಂದು ನೀವು ಸೂಚನೆ ಕೊಡಲು ಸಹ ಆಗುವುದಿಲ್ಲ. ಪ್ರತಿಭಟಿಸುವುದು ನಮ್ಮ ಹಕ್ಕು ನಾವು ಮಾಡುತ್ತೇವೆ, ಅದರಲ್ಲಿ ಮಧ್ಯಪ್ರವೇಶ ಮಾಡಲು ನಿಮಗೆ ಅವಕಾಶ ಇಲ್ಲ ಎಂದರು.

ಹೀಗೆ ಎರಡು ಕಡೆಗಳ ನಡುವೆ ಮಾತಿನ ಜಟಾಪಟಿ ನಡೆದು ಅಂತಿಮವಾಗಿ ಪೊಲೀಸರ ಕೋರಿಕೆ ಮೇರೆಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯಿಂದ ತೆರಳಿದರು. ಆನಂತರ ಪೊಲೀಸರು ಮಾರ್ಗಮಧ್ಯದಲ್ಲಿಯೇ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರನ್ನ ವಶಕ್ಕೆ ಪಡೆದು ಪ್ರಸಹನಕ್ಕೆ ಅಂತ್ಯವಾಡಿದ್ರು.

