Shivamogga ಶಿವಮೊಗ್ಗ : ಶಿವಮೊಗ್ಗ : ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ಸಿಜೆಪಿ ನಡೆಸಿದ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ನೀಡಿದ ಬೆನ್ನಲ್ಲೇ, ಇತ್ತ ಶಿವಮೊಗ್ಗದಲ್ಲೂ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಳಂಬ, ಕೆ ಎಸ್ ಈಶ್ವರಪ್ಪ ಹೇಳಿದ್ದೇನು
ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರು. ಮಹಾವೀರ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಹೋರಾಟ ಆರಂಭಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಯಾವುದೇ ಪೂರ್ವಯೋಜನೆಯಿಲ್ಲದೆ, ಮಹಾವೀರ ವೃತ್ತದಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿದ್ದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಓಡಿದರು. ಈ ತರಾತುರಿಯಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಹಲವು ವಾಹನಗಳು ನೆಲಕ್ಕೆ ಬಿದ್ದವು. ಕಚೇರಿಗೆ ಮುತ್ತಿಗೆ ಹಾಕುವಷ್ಟರಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿಯನ್ನು ಹತೋಟಿಗೆ ತಂದರು.
ಪ್ರತಿಭಟನೆಯ ವೇಳೆ ಕಚೇರಿಯ ಮುಂಭಾಗ ತೀವ್ರ ಹೈಡ್ರಾಮಾವೇ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪೊಲೀಸರ ವಾಹನದ ಮೇಲೆ ಹತ್ತಿ ಪಕ್ಷದ ಬಾವುಟ ಬೀಸಿ ಆಕ್ರೋಶ ಹೊರಹಾಕಿದರು. ಇದನ್ನು ಕಂಡು ಕೆರಳಿದ ಬಿಜೆಪಿ ಕಾರ್ಯಕರ್ತರು, ಸರ್ಕಾರಿ ವಾಹನದ ಮೇಲೆ ಹತ್ತಿ ಏಕೆ ರಾದ್ಧಾಂತ ಸೃಷ್ಟಿಸುತ್ತಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುತ್ತಿಗೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಕಚೇರಿಯ ಬಳಿ ಜಮಾಯಿಸಿದರು. ಬಿಜೆಪಿ ಕಚೇರಿಯ ಶಟರ್ ಎಳೆಯಲು ನೀವು ಯಾರು? ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದರು. ನಮ್ಮ ರಕ್ಷಣೆ ಮಾಡಿಕೊಳ್ಳಲು ನಮಗೆ ಗೊತ್ತು, ನಿಮ್ಮ ರಕ್ಷಣೆ ನಮಗೆ ಬೇಕಿಲ್ಲ..ಎಂದು ಪೊಲೀಸರ ವಿರುದ್ಧವೇ ಬಿಜೆಪಿ ನಾಯಕರು ವಾಗ್ವಾದಕ್ಕಿಳಿದ ಘಟನೆ ಜರುಗಿತು.
