ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡಿನಾದ್ಯಂತ ಕಸ್ತೂರಿರಂಗನ್ ವರದಿ ವಿರುದ್ಧವಾಗಿ ಬೃಹತ್ ಪಾದಯಾತ್ರೆಗಳು ನಡೆಯುತ್ತಿವೆ. ಈಗಾಗಲೇ ಹೊಸನಗರ, ಸಾಗರದಲ್ಲಿ ಪಾದಯಾತ್ರೆಗಳು ಮುಗಿದಿದ್ದು, ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟಂಬರ್ 07 ರಂದು ತೀರ್ಥಹಳ್ಳಿ ತಾಲೂಕಿನ ಬಿಂತ್ಲಾ ಗ್ರಾಮದಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಘೋಷಿಸಿದ್ದು, ನಾವು ಬಿಜೆಪಿಯವರೊಂದಿಗೆ ಪಾದಯಾತ್ರೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಡಿಯಲ್ಲಿ ಮಾತನಾಡಿದ ಅವರು, ಸೆಪ್ಟಂಬರ್ 07 ರಂದು ಕಸ್ತೂರಿರಂಗನ್ ವರದಿ ಯೋಜನೆಯ ಭಾಗವಾಗಿರುವ ಬಿಂತ್ಲಾ ಗ್ರಾಮದಿಂದ ಬೆಳಿಗ್ಗೆ 09 ಗಂಟೆಗೆ ಪಾದಯಾತ್ರೆಯನ್ನು ಆರಂಭಿಸುತ್ತೇನೆ. ಈ ಪಾದಯಾತ್ರೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ಹಾಗೂ ರಮೇಶ್ ಹೆಗ್ಡೆ ಚಾಲನೆ ನೀಡಲಿದ್ದಾರೆ. ಅಲ್ಲಿಂದ ಪಟ್ಟಣ ಪಂಚಾಯಿತಿ ಬಳಿ ಇರುವ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಬೃಹತ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಿ ಬೆಂಬಲ ನೀಡಲಿದ್ದಾರೆ ಎಂದರು.
ಈ ಹಿಂದೆ ಅಂದರೆ 2013 ರಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಸಹ ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಕರಡು ಕರೆಯಲಾಗಿತ್ತು. ಆ ಸಂದರ್ಭದಲ್ಲಿ ಕ್ಯಾಬಿನೆಟ್ ಸಮಿತಿಯನ್ನು ರಚಿಸಲಾಗಿತ್ತು, ನಾನು ಅದರ ಸದಸ್ಯನಾಗಿದ್ದೆ. ನಂತರ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಿ ಅದನ್ನು ಒಕ್ಕೊರಲಿನಿಂದ ವಿರೋಧಿಸಿದ್ದೆವು.
ಆದರೆ ಈಗ ಜುಲೈ 2026 ರಲ್ಲಿ ಮತ್ತೊಮ್ಮೆ ಕರಡು ಹೊರಡಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಬಿಜೆಪಿಯ ಪಾರ್ಲಿಮೆಂಟ್ ಸಂಸದರು ಹಾಗೂ ರಾಜ್ಯ ನಾಯಕರು ಇಲ್ಲಿ ಹೋರಾಟ ಮಾಡುವುದನ್ನು ಬಿಟ್ಟು, ದೆಹಲಿಗೆ ತೆರಳಿ ಅರಣ್ಯ ಸಚಿವ ಹಾಗೂ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಈ ಯೋಜನೆ ಬೇಡವೆಂದು ಒತ್ತಾಯಿಸಬೇಕು. ದೇಶದಲ್ಲಿ 1900 ರ ಇಸವಿಯಲ್ಲಿ 20 ಕೋಟಿ ಜನಸಂಖ್ಯೆ ಇತ್ತು, ಈಗ 140 ಕೋಟಿ ಆಗಿದೆ. ಪ್ರದೇಶ ಅಷ್ಟೇ ಇದೆ, ಆದರೆ ಜನಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಜನರು ಏನು ನೀರಲ್ಲಿ ಹೋಗಿ ವಾಸಿಸಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಹಾಗಾಗಿ ಮನುಷ್ಯನಿಗೆ ಜಾಗ ಎಂಬುದು ಅನಿವಾರ್ಯವಾಗಿದೆ. ಕಾಡುಪ್ರಾಣಿ ಬದುಕಬೇಕು, ಮನುಷ್ಯ ಸಾಯಬೇಕು ಎಂದರೆ ಸಾಧ್ಯವಿಲ್ಲ. ಎಸಿ ರೂಮಿನಲ್ಲಿ ಕುಳಿತವರು ಏನೇನೋ ಕಾನೂನು ಜಾರಿಗೆ ತರುತ್ತಾರೆ. ಮನುಷ್ಯ ಬದುಕಿದ ಮೇಲೆ ಉಳಿದಿದ್ದ ನ್ನು ನೋಡೋಣ. ನ್ಯಾಷನಲ್ ಹೈವೇ ಆದಾಗ ಎಷ್ಟೋ ಮರಗಳು ನಾಶವಾಗುತ್ತವೆ, ಭೂಕಂಪಕ್ಕೆ ಅದೇ ಪ್ರಮುಖ ಕಾರಣ ಎನ್ನಲಾಗುತ್ತದೆ. ಆದರೆ ಮನುಷ್ಯ ಹಕ್ಕುಪತ್ರ ಕೇಳಿದಾಗ ಅರಣ್ಯದ ಕಾರಣ ನೀಡುತ್ತಾರೆ ಎಂದರು.
ಬಿಜೆಪಿಯವರು ಪಾದಯಾತ್ರೆಗೆ ಬರುವುದು ಬೇಡ, ಜನ ಏನಂತಾರೆ?
ಇನ್ನೂ ಹಲವೆಡೆ ಪಕ್ಷಾತೀತವಾಗಿ ಪಾದಯಾತ್ರೆಗಳು ನಡೆಯುತ್ತಿವೆ. ಆದರೆ ನಮ್ಮ ತೀರ್ಥಹಳ್ಳಿಯಲ್ಲಿ ಬಿಜೆಪಿಗರು ನಮ್ಮ ಬೆಂಬಲಕ್ಕೆ ಬರುವುದು ಬೇಡ. ಏಕೆಂದರೆ ಈಗಾಗಲೇ ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಿ ಅವರು ರಾಜ್ಯದಲ್ಲಿ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಇದರ ನಡುವೆ ನಾವು ಕಸ್ತೂರಿರಂಗನ್ ವಿರುದ್ಧವಾಗಿ, ಕೇಂದ್ರದ ವಿರುದ್ಧವಾಗಿ ಘೋಷಣೆ ಕೂಗಿದರೆ ಅವರಿಗೆ ಸರಿ ಅನಿಸುವುದಿಲ್ಲ. ಆಕಡೆ ನಮ್ಮ ವಿರುದ್ಧವಾಗಿ ಪಾದಯಾತ್ರೆ ಮಾಡುತ್ತಿರುವವರು, ಈಕಡೆ ನಮ್ಮೊಂದಿಗೆ ಪಾದಯಾತ್ರೆ ಮಾಡಿದರೆ ನೋಡಿದ ಜನ ಏನಂತಾರೆ? ಎಂದು ಪ್ರಶ್ನಿಸಿದರು.
ಹಾಗೆಯೇ ಬಿಂತ್ಲಾ ಗ್ರಾಮದಿಂದ ಪಾದಯಾತ್ರೆ ನಡೆಸಲು ಪ್ರಮುಖ ಕಾರಣವಿದೆ. ಮೊದಲನೆಯದು ಅದು ಸಹ ಕಸ್ತೂರಿರಂಗನ್ ವ್ಯಾಪ್ತಿಗೆ ಒಳಪಡುತ್ತಿದೆ. ಇನ್ನೊಂದು, ನಮ್ಮ ಕಡೆ 25 ವರ್ಷ ಶಾಸಕರಾದವರು ಒಬ್ಬರಿದ್ದಾರೆ. ಆರಗ ಜ್ಞಾನೇಂದ್ರ ಅವರ ಮಗ ಬಿಂತ್ಲಾದಲ್ಲಿ 10 ಎಕರೆ ಜಮೀನು ಮಾಡಿದ್ದಾರೆ. ಅವರ ಕಡೆಯವರಿಗೆ ಹಾಗೂ ಬೇಕಾದವರಿಗೆ ರಸ್ತೆ ಮಾಡಿಸಿಕೊಟ್ಟಿದ್ದಾರೆ. ಅವರ ಪ್ರಕಾರ ಬಿಜೆಪಿಯವರು ಬಿಟ್ಟರೆ ದೇಶದಲ್ಲಿ ಯಾರೂ ದೊಡ್ಡವರಿಲ್ಲ ಎನ್ನುವ ಭಾವನೆ. ಅವರ ಕಾಂಟ್ರಾಕ್ಟರ್‌ಗಳು ಮಾತ್ರ ಒಳ್ಳೆಯವರು, ಬೇರೆ ಯಾರೂ ಇಲ್ಲ ಎಂಬ ಮನಸ್ಥಿತಿ. ತೀರ್ಥಹಳ್ಳಿ ಇವತ್ತು ಹಿಂದುಳಿದಿದೆ ಎಂದರೆ ಅದಕ್ಕೆ ಅವರೇ ಕಾರಣ. ಅಲ್ಲಿ ಆದಂತಹ ತೊಂದರೆಗಳನ್ನು ಸರಿಪಡಿಸಲು ಹೀಗೆ ಮಾಡಿದ್ದೇವೆ ಎಂದರು.
