ಶಿವಮೊಗ್ಗ : ಶಿವಮೊಗ್ಗದ ಊರುಗಡೂರಿನಲ್ಲಿ ಮೊನ್ನೆ ರಾತ್ರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್‌ನನ್ನು ಅಪ್ರಾಪ್ತರ ಗುಂಪೊಂದು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಹಲ್ಲೆ ಮಾಡಿದ ಹುಡುಗರು ಅನ್ಯ ಕೋಮಿನವರು ಎಂಬ ವಿಷಯ ಆತಂಕಕ್ಕೀಡು ಮಾಡಿತ್ತು. ಶಿವಮೊಗ್ಗದ ಊರಿಗೆ ಊರೇ ಮಾರಿ ಹಬ್ಬದ ಸಂಭ್ರಮದಲ್ಲಿರುವ ಹೊತ್ತಿನಲ್ಲಿ ಈ ಘಟನೆ ನಡೆದಿದ್ದು, ಎಲ್ಲರಲ್ಲೂ ಭಯದ ವಾತಾವರಣ ನಿರ್ಮಾಣ ಮಾಡಿತ್ತು.
ಶಿವಮೊಗ್ಗ ಮಾರಿಜಾತ್ರೆ ಹೇಗಿದೆ ವ್ಯವಸ್ಥೆ ಪೂರ್ತಿ ವಿವರ ಇವತ್ತಿನ ಇ-ಪೇಪರ್ ಓದಿ
ಆದರೆ ಊರ ಜನರ ಆತಂಕವನ್ನು ದೂರ ಮಾಡಿದ್ದು ಮತ್ತದೇ ಊರುಗಡೂರಿನ ಜನತೆ. ಸಂಕೇತ್ ಮೃತದೇಹದ ಪಂಚನಾಮೆ ನಡೆಯುವಾಗ ಅಲ್ಲಿ ಊರುಗಡೂರಿನ ಹಿಂದೂ-ಮುಸ್ಲಿಂ ಬಾಂಧವರು ಜಮಾಯಿಸಿದ್ದರು. ಈ ಘಟನೆಯು ಮತೀಯ ಬಣ್ಣ ಪಡೆಯಲು ಬಿಡದೆ ಎರಡೂ ಕೋಮಿನವರು ಒಗ್ಗಟ್ಟು ಮೆರೆದರು. ಸಂಕೇತ್ ಹತ್ಯೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲು ವ್ಯವಸ್ಥೆ ಮುಂದಾದಾಗಲೂ ಸಂಕೇತ್ ಕುಟುಂಬ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದಕ್ಕೆ ಕಾರಣ ಊರುಗಡೂರಿನಲ್ಲಿ ಜಾತಿ-ಧರ್ಮ ಮೀರಿ ಎಲ್ಲರೂ ಒಟ್ಟಾಗಿ ಇರುವುದು.
ಇಲ್ಲಿ ಹಿಂದೂ-ಮುಸ್ಲಿಂ ‘ಭಾಯಿ-ಭಾಯಿ’ ಎನ್ನುವ ವಾತಾವರಣವನ್ನು ಕಾಣಬಹುದು. ಹಬ್ಬಗಳ ಸಂದರ್ಭದಲ್ಲಿ ಇಲ್ಲಿ ಸೌಹಾರ್ದತೆಯು ಎದ್ದು ಕಾಣುತ್ತದೆ. ಮತೀಯ ಶಕ್ತಿಗಳು ಇಲ್ಲಿನ ಸೌಹಾರ್ದ ವಾತಾವರಣ ಕದಡಲು ಹಲವು ಬಾರಿ ಪ್ರಯತ್ನ ಪಟ್ಟಿದ್ದರೂ, ಸ್ಥಳೀಯರು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಸಂಕೇತ್ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಕಂಬನಿ ಮಿಡಿದರು. ಮುಸ್ಲಿಂ ಬಾಂಧವರು ಅಂತ್ಯಸಂಸ್ಕಾರದ ಕೊನೆಯವರೆಗೂ ಜೊತೆಗಿದ್ದರು.
ಏನೇ ಆಗಲಿ, ಇಂತಹ ಘಟನೆಗಳು ನಡೆದಾಗ ಸ್ಥಳೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗುತ್ತವೆ. ಊರುಗಡೂರಿನ ಜನರು ಇಂತಹ ಘಟನೆಗೆ ಮಾನವೀಯತೆಯ ತಾರ್ಕಿಕ ಅಂತ್ಯ ಹಾಡುವ ಮೂಲಕ ಶಿವಮೊಗ್ಗದ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಮುನ್ನುಡಿ ಬರೆದಿದ್ದಾರೆ. ಇಂತಹ ವಾತಾವರಣ ಎಲ್ಲೆಡೆ ಪಸರಿಸಲಿ, ಈ ಮೂಲಕ ಮೃತ ಸಂಕೇತ್‌ನ ನೆನಪು ಅಜರಾಮರವಾಗಲಿ.
Shimogga Unity Beyond Religion Uragadur Case

Shimogga Unity Beyond Religion Uragadur Case

