Nanjappa Life Care in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ಡಾಕ್ಟರ್ಗಳು ವೈದ್ಯಕೀಯ ಇತಿಹಾಸದಲ್ಲಿ ಅಪರೂಪದ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ.
ಜುಲೈ 17 ರಂದು ಶಿವಮೊಗ್ಗ ಪ್ರಥಮ ಬಾರಿಗೆ, ನಂಜಪ್ಪ ಆಸ್ಪತ್ರೆಯಲ್ಲಿ ಅಮೆರಿಕದ ಅತ್ಯಾಧುನಿಕ ರೋಬೋಟಿಕ್ ತಂತ್ರಜ್ಞಾನದ ನೆರವಿನೊಂದಿಗೆ 57 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಮೊಣಕಾಲು ಚಿಪ್ಪು ಮರುಜೋಡಣಾ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಪ್ರಖ್ಯಾತ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕರಾದ ಡಾ. ವಿನ್ಸೆಂಟ್ ಮೆಕ್‌ಮೋಹನ್ ಹಾಗೂ ಡಾ. ಎ.ಸಿ. ಪ್ರೇಮರಾಜ್ ಅವರ ಪರಿಣಿತ ವೈದ್ಯರ ತಂಡದ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ರೋಬೋಟಿಕ್ ತಂತ್ರಜ್ಞಾನದ ಬಳಕೆಯಿಂದಾಗಿ ಶಸ್ತ್ರಚಿಕಿತ್ಸೆಯು ನೂರಕ್ಕೆ ನೂರರಷ್ಟು ನಿಖರವಾಗಿ ಮೂಡಿಬಂದಿದ್ದು, ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರತೆಯನ್ನು ಹೊಂದಿರುತ್ತದೆ. ರೋಗಿಗಳಿಗೆ ಕಡಿಮೆ ನೋವು, ಶೀಘ್ರ ಸಹಜ ಚಲನಶೀಲತೆಯ ಜೊತೆಗೆ ನಿಖರವಾದ ಮಂಡಿ ಚಿಪ್ಪು ಮರುಜೋಡಣೆ ಆಗುತ್ತದೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ವಿವರಣೆ ನೀಡಿದ ಆರ್ಥೋಪೆಡಿಕ್, ಆರ್ಥ್ರೋಸ್ಕೋಪಿ ಮತ್ತು ರೋಬೋಟಿಕ್ ತಜ್ಞರಾದ ಡಾ. ವಿನ್ಸೆಂಟ್ ಮೆಕ್‌ಮೋಹನ್ ಅವರು, ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ರೋಬೋಟಿಕ್ ಶಸ್ತ್ರಚಿಕಿತ್ಸೆಯು ಅತ್ಯಂತ ನಿಖರವಾಗಿರುತ್ತದೆ. ರೋಬೋಟ್ ಸಹಾಯದಿಂದ ಕನಿಷ್ಠ ಸಮಯದಲ್ಲಿ ಮತ್ತು ಸಣ್ಣ ಗಾಯದ ಮೂಲಕ ಮೃದು ಅಂಗಾಂಶಗಳಿಗೆ ಯಾವುದೇ ತೊಂದರೆಯಾಗದಂತೆ ಪ್ರಕ್ರಿಯೆ ನಡೆಸಲಾಗಿದೆ. ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸೆ ನಡೆದ ದಿನವೇ ರೋಗಿಯು ತಾವಾಗಿಯೇ ನಡೆದಾಡುವಷ್ಟು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಡಾ. ಎ.ಸಿ. ಪ್ರೇಮರಾಜ್ ಅವರು ಮಾತನಾಡಿ, ಈ ಮುಂದುವರಿದ ಅಮೆರಿಕನ್ ತಂತ್ರಜ್ಞಾನದ ಬಳಕೆಯಿಂದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನಂತರ ಕಾಡುವ ನೋವು ಮತ್ತು ರಕ್ತಸ್ರಾವ ಅತ್ಯಂತ ಕಡಿಮೆಯಿರುತ್ತದೆ. ಸೋಂಕಿನ ಸಾಧ್ಯತೆಗಳು ಸಂಪೂರ್ಣ ಕ್ಷೀಣಿಸಲಿದ್ದು, ರೋಗಿಗಳು ಅತಿ ಶೀಘ್ರವಾಗಿ ಚೇತರಿಸಿಕೊಂಡು ಬೇಗನೇ ಮನೆಗೆ ಮರಳಲು ಇದು ಸಹಕಾರಿಯಾಗಿದೆ. ಮಂಡಿಚಿಪ್ಪನ್ನು ಕಸಿ ಮುಖಾಂತರ ಮರುಜೋಡಿಸುವಾಗ ರೋಬೋಟ್ ಸಹಾಯದಿಂದ ವೈದ್ಯರು ಬಹಳ ಪರ್ಫೆಕ್ಟ್ ಆಗಿ ಫಿಟ್ ಮಾಡುತ್ತಾರೆ. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸಹಜವಾಗಿ ನಡೆಯುತ್ತಾರೆ, ಅವರಿಗೆ ಮೊಣಕಾಲು ಕಸಿ ಆಗಿದೆ ಎಂಬ ಅನುಭವವೇ ಆಗುವುದಿಲ್ಲ ಎಂದು ತಿಳಿಸಿದರು.
