Shimoga Paper Factory ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಈ ವರ್ಷ ಸಂಭವಿಸಿದ ಅತೀ ದೊಡ್ಡ ಅಗ್ನಿ ಅವಘಡವಿದು. ಆಗಸಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಸಿಬ್ಬಂದಿಗಳ ಪರದಾಟ 12 ಗಂಟೆಗೂ ಮೀರಿದ ದೀರ್ಘ ಕಾರ್ಯಾಚರಣೆ. ಬೆಂಕಿ ನಂದಿಸುವಷ್ಟರಲ್ಲಿ ಆದ ನಷ್ಟ ಕೋಟಿ ದಾಟಿತ್ತು. ಪೇಪರ್ ಬಂಡಲ್ ಗಳು ಬೂದಿಮಯವಾಗಿದ್ದವು. ಹೌದು ಇದು ನೆನ್ನೆ ಶಿವಮೊಗ್ಗದ ಪೇಪರ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಚಿತ್ರಣ.
ಶಿವಮೊಗ್ಗ: ಸಿಟಿ ಬಸ್‌ಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆಯೇ? ಈ ನಂಬರ್‌ಗೆ ಕಾಲ್ ಮಾಡಿ
ಶಿವಮೊಗ್ಗದ ಪೇಪರ್ ಪ್ಯಾಕೇಜಿಂಗ್ ಕಾರ್ಖಾನೆ ಗೋಡೌನ್ ನಲ್ಲಿ 15-07-26 ರಂದು ಸಂಜೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡಕ್ಕೆ ಸಾಕಷ್ಟು ನಷ್ಟ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಖಾನೆಯ ಸಿಬ್ಬಂದಿಗಳು ಅಗ್ನಿ ಶಾಮಕ ಅಧಿಕಾರಿಗಳಿಗೆ ಪೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ರೀಜಿನಲ್ ಅಧಿಕಾರಿ ರಾಜು ರವರ ತಂಡ ಬೆಂಕಿ ಕೆನ್ನಾಲಿಗೆ ಕಂಡು ದಂಗಾಗಿ ಹೋಗಿದೆ. ಮುಗಿಲೆತ್ತರಕ್ಕೆ ಚಾಚಿಕೊಂಡಿರುವ ಬೆಂಕಿ ಮತ್ತು ಹೊಗೆ ನಂದಿಸುವುದು ಆ ಕ್ಷಣಕ್ಕೆ ಅಗ್ನಿಶಾಮಕ ಸಿಬ್ಬಂದಿಗಳಿಗೆ ಸವಾಲಾಗಿತ್ತು..
ಬೆಂಕಿ ನಂದಿಸಲು ಹೆಚ್ಚಿನ ಪ್ರಮಾಣದಲ್ಲಿ ನೀರು ಅವಶ್ಯಕತೆ ಇದ್ದ ಕಾರಣಕ್ಕೆ ಸುತ್ತಮುತ್ತ ತಾಲೂಕುಗಳಿಂದ ಫೈರ್ ಇಂಜಿನ್ ವಾಹನ ತರಿಸಿಕೊಳ್ಳಲಾಯಿತು. ನಲ್ವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು. 12 ಗಂಟೆಗಳ ನಿರಂತರ ಕಾರ್ಯಾಚರಣೆ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ ಬಾಗಶಃ ಪೇಪರ್ ಬಂಡಲ್ ಗಳು ಅಗ್ನಿ ಗೆ ಆಹುತಿಯಾಗಿತ್ತು. ಒಂದುವರೆ ಕೋಟಿಗೂ ಅಧಿಕ ಮೌಲ್ಯದ ಪೇಪರ್ ಬಂಜಲ್ ಮತ್ತು ಮಷಿನ್ ಬೆಂಕಿಗಾಹುತಿಯಾಗಿದೆ.
ಕಾರ್ಖಾನೆಗೆ ಬೆಂಕಿ ಬಿದ್ದ ತಕ್ಷಣ ಕಾರ್ಮಿಕರೂ ಕೂಡ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳಿಗೆ ನೆರವಾಗಿದ್ದಾರೆ. ಸಂಜೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅಗ್ನಿಶಾಮಕ ದಳಕ್ಕೆ ಫೋನಾಯಿಸಿದೆವು. ಬೆಂಕಿಯಿಂದ ಸಾಕಷ್ಟು ನಷ್ಟವಾಗಿದೆ ಎಂದು ಕಾರ್ಮಿಕ ಮುಖಂಡ ರಿಯಾಝ್ ಹೇಳಿದ್ದಾರೆ.
ಕಾರ್ಖಾನೆ ಮಾಲೀಕರು ಸಧ್ಯ ಪುಣೆಯಲ್ಲಿದ್ದು, ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಕಾರ್ಖಾನೆಗಾದ ನಷ್ಟವನ್ನು ಸಂಬಂಧಿಸಿದ ಇನ್ಷುರೆನ್ಸ್ ಕಂಪನಿ ಮೂಲಕ ಭರಿಸಬೇಕಿದೆ. ಬೆಂಕಿ ನಂದಿಸಿದ ನಂತರ ಕಾರ್ಖಾನೆಯಲ್ಲಿ ಬೆಂಕಿ ಗೆ ಆಹುತಿಯಾದ ಪೇಪರ್ ಬಂಡಲ್ ಗಳನ್ನು ಒಂದೆಡೆ ಎತ್ತಿ ಇಡಲಾಗುತ್ತಿತ್ತು. ಜೆಸಿಬಿ ಯಂತ್ರಗಳ ಮೂಲಕ ಕ್ಲೀನ್ ಮಾಡುವ ಕಾರ್ಯ ಭರದಿಂದ ಸಾಗಿದೆ..
