ಶಿವಮೊಗ್ಗ : ನೂರಾರು ಹೆಕ್ಟರ್​ ಅಡಿಕೆ ತೋಟ ನಾಶ : ಪ್ರತಿ ಅಡಿಕೆ ಮರಕ್ಕೆ ಸರ್ಕಾರ ಘೊಷಿಸಿದ ಪರಿಹಾರವೆಷ್ಟು?

ಹಂಚಿಕೊಳ್ಳಿ
WhatsApp Facebook X Telegram
Shimoga Areca Farmers Slam Low Relief
Shimoga Areca Farmers Slam Low Relief

Shimoga ಶಿವಮೊಗ್ಗ: ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ಸಿಲುಕಿ ಹಾನಿಗೊಳಗಾದ ತೋಟಗಳಿಗೆ ಸರ್ಕಾರ ಒಂದು ಅಡಿಕೆ ಮರ ನಾಶಕ್ಕೆ 17 ನಿಗದಿಪಡಿಸಿದ್ದು, ಸರ್ಕಾರದ ವಿರುದ್ದ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇಡೀ ಹೆಕ್ಟೇರ್ ತೋಟವೇ ನಾಶವಾಗಿದ್ದರೂ ಸಿಗುತ್ತಿರುವುದು ಬರೀ 22,500 ರೂ. ಮಾತ್ರ. ಕೇಂದ್ರ ಸರ್ಕಾರದ ಈ ಎನ್‌ಡಿಆರ್‌ಎಫ್ ನಿಯಮಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ಕಾರ ಪರಿಹಾರದ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಬೆಳೆಗಾರರು ಕಿಡಿಕಾರಿದ್ದಾರೆ.

ಶಿವಮೊಗ್ಗ ಕುಡಿಯುವ ನೀರು ವ್ಯತ್ಯಯ: ನ್ಯೂ ಮಂಡ್ಲಿ ಪಂಪ್ ಹೌಸ್‌ಗೆ ಶಾಸಕ ಚನ್ನಬಸಪ್ಪ ದಿಢೀರ್ ಭೇಟಿ, 

ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೀಸಿದ ಬಿರುಗಾಳಿಯ ಆರ್ಭಟಕ್ಕೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯಲ್ಲಿ ನೂರಾರು ತೋಟಗಳು ಧರೆಗುರುಳಿವೆ. ಜಿಲ್ಲಾದ್ಯಂತ ಬರೋಬ್ಬರಿ 974 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದ್ದು, ಇದರಲ್ಲಿ 650 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಶೇಕಡಾ 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಗಾಳಿಯ ಹೊಡೆತಕ್ಕೆ ಸುಮಾರು 12 ಲಕ್ಷಕ್ಕೂ ಅಧಿಕ ಅಡಿಕೆ ಮರಗಳು ನೆಲಕಚ್ಚಿವೆ. ತೋಟದಲ್ಲಿದ್ದ ಪ್ರತಿ ರೈತರು ಸರಾಸರಿ 1 ರಿಂದ 1,000 ದವರೆಗೆ ಅಡಿಕೆ ಮರಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ದುರಂತವೆಂದರೆ, ತೋಟದಲ್ಲಿ ಬಿದ್ದಿರುವ ಮರಗಳನ್ನು ಕತ್ತರಿಸಿ ಸಾಗಿಸಲೇ ಸಾವಿರಾರು ರೂಪಾಯಿ ಖರ್ಚಾಗುತ್ತಿದ್ದು, ಸರ್ಕಾರ ನೀಡುವ ಅಲ್ಪ ಮೊತ್ತದ ಪರಿಹಾರ ಅದಕ್ಕೂ ಸಾಲುತ್ತಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ.

ಕೇಂದ್ರದ 20 ವರ್ಷಗಳ ಹಳೆಯ ಔಟ್‌ಡೇಟೆಡ್ NDRF ಮಾನದಂಡಗಳನ್ನೇ ಇಂದಿಗೂ ಬಳಸುತ್ತಿರುವುದಕ್ಕೆ ರಾಜ್ಯ ರೈತ ಸಂಘ ತೀವ್ರ ಪ್ರತಿಭಟನೆ ಹಮ್ಮಿಕೊಂಡಿದ್ದು, ವಿಶೇಷ ಪರಿಹಾರಕ್ಕೆ ಆಗ್ರಹಿಸಿದೆ. ಶೇ. 33 ಕ್ಕಿಂತ ಕಡಿಮೆ ಹಾನಿಯಾದರೆ 100 ಮರಗಳಿಗೆ ಸಿಗುತ್ತಿರುವುದು ಕೇವಲ 2,500 ರೂಪಾಯಿ ಮಾತ್ರ. ಈ ಕುರಿತು ಪ್ರತಿಕ್ರಿಯಿಸಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು, ಸದ್ಯಕ್ಕೆ ಎನ್‌ಡಿಆರ್‌ಎಫ್ ನಿಯಮಾವಳಿಗಳಂತೆಯೇ ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಹಾನಿಯ ತೀವ್ರತೆ ಹೆಚ್ಚಿರುವುದರಿಂದ ರೈತರಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಜಿಲ್ಲಾಡಳಿತದ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor