
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಹಿರಿಯ ಪತ್ರಕರ್ತ, ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಭಂಡಿಗಡಿ ಆರ್. ನಂಜುಂಡಪ್ಪ (75) ಅವರ ನಿಧನಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಪತ್ರಿಕಾ ಭವನದ ಆವರಣದಲ್ಲಿ ಸಂತಾಪ ಸಭೆ ನಡೆಸಲಾಯಿತು.
ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ ಮಾತನಾಡಿ, ನಾವೆಲ್ಲರೂ ಒಟ್ಟಿಗೆ ಬೆಳೆದವರು. ನಂಜುಂಡಪ್ಪ ಅವರೊಂದಿಗೆ ಆತ್ಮೀಯ ಸಂಬಂಧವಿತ್ತು. ಅವರ ನಿಧನದಿಂದ ಪತ್ರಿಕಾ ಕ್ಷೇತ್ರದ ಕೊಂಡಿಯೊಂದು ಕಳಚಿದಂತಾಗಿದೆ’ ಎಂದು ಸಂತಾಪ ಸೂಚಿಸಿದರು.


ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ ಮಾತನಾಡಿ, ನಂಜುಂಡಪ್ಪ ಅವರೊಂದಿಗೆ ನಾಲ್ಕು ದಶಕಗಳ ಒಡನಾಟವಿತ್ತು. ಭಾನುವಾರ ಹೊರತುಪಡಿಸಿ ಅವರು ಒಂದು ದಿನವೂ ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿರಲಿಲ್ಲ. ಪತ್ರಿಕೆ ನಡೆಸುವಲ್ಲಿ ಅವರಿಗಿದ್ದ ಬದ್ಧತೆ ಗಮನಾರ್ಹ. ಎಲ್ಲರೊಂದಿಗೂ ನಗುಮುಖದಿಂದ ಆತ್ಮೀಯವಾಗಿ ಬೆರೆಯುತ್ತಿದ್ದರು’ ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಅವರು ನಂಜುಂಡಪ್ಪ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ ಸಂತಾಪ ಸೂಚಿಸಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಪತ್ರಕರ್ತರು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ದಿ. ನಂಜುಂಡಪ್ಪ ಅವರ ಪಾರ್ಥಿವ ಶರೀರವನ್ನು ಪತ್ರಿಕಾ ಭವನಕ್ಕೆ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ .ಎಸ್.ಅರುಣ್, ಸ್ಬೂಡಾ ಅಧ್ಯಕ್ಷ ಮಧುಸೂದನ್, ಜಿ.ಡಿ ಮಂಜುನಾಥ ಸೇರಿದಂತೆ ಪ್ರಮುಖರು ದರ್ಶನ ಪಡೆದರು.
ನಂಜುಂಡಪ್ಪ ಅವರ ಶಿವಗಣಾರಾಧನೆ ಅ. 16ರಂದು ಬೆಳಿಗ್ಗೆ 10 ಗಂಟೆಗೆ ತೇವರಚಟ್ನಹಳ್ಳಿಯಲ್ಲಿರುವ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಯು. ವೈದ್ಯನಾಥ್, ಹುಚ್ಚುರಾಯಪ್ಪ, ವೈ.ಕೆ. ಸೂರ್ಯನಾರಾಯಣ, ನಾಗರಾಜ್ ನೇರಿಗೆ, ಎನ್. ರವಿಕುಮಾರ್, ಆರ್.ಎಸ್. ಹಾಲಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಗಜೇಂದ್ರ ಸ್ವಾಮಿ, ಶಿ.ಜು. ಪಾಷಾ, ಜೇಸುದಾಸ್ ಹಾಗೂ ಪದ್ಮನಾಭ ಇದ್ದರು.

