ಮಲೆನಾಡು ಟುಡೆ ಸುದ್ದಿ / ಸಾಗರ / ಆನ್ಲೈನ್ ಶಾಪಿಂಗ್ ತಾಣ ಮೀಶೋ ಹೆಸರಿನಲ್ಲಿ ಲಕ್ಕಿ ಡ್ರಾ ಆಮಿಷವೊಡ್ಡಿ ಸಾಗರದ ಮಹಿಳೆಯೊಬ್ಬರಿಗೆ ಬರೋಬ್ಬರಿ 23,40,179 ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೀಶೋ ಲಕ್ಕಿ ಡ್ರಾ
ಸಾಗರ ಮಹಿಳೆಯೊಬ್ಬರಿಗೆ ಈ ರೀತಿ ವಂಚಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಮೀಶೋ ಆನ್ಲೈನ್ ಶಾಪಿಂಗ್ ಕಡೆಯಿಂದ ಬಂದಿರುವುದಾಗಿ ಹೇಳಲಾದ ಒಂದು ಸ್ಪೀಡ್ ಪೋಸ್ಟ್ ಬಂದಿತ್ತು. ಆ ಪತ್ರವನ್ನು ಅವರು ತೆರೆದು ನೋಡಿದಾಗ, ಮೀಶೋ ಆನ್ಲೈನ್ ಶಾಪಿಂಗ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಕಂಪನಿಯ ನೊಂದಾಯಿತ ಗ್ರಾಹಕರಿಗಾಗಿ ಲಕ್ಕಿ ಡ್ರಾ ಸ್ಪರ್ಧೆಯನ್ನು ಆಯೋಜಿಸಿದ್ದು, ಅದರಲ್ಲಿ ನೀವು ಕೂಡ ಆಯ್ಕೆಯಾಗಿದ್ದೀರಿ ಎಂದು ಬರೆಯಲಾಗಿತ್ತು. ಅದರಲ್ಲಿದ್ದ ಒಂದು ಕಾರ್ಡ್ ಅನ್ನು ಸ್ಕ್ರ್ಯಾಚ್ ಮಾಡಿ ನೀವು ಬಹುಮಾನ ಗೆದ್ದರೆ, ನಿಮ್ಮ ದಾಖಲೆಗಳ ನಕಲು ಪ್ರತಿಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿತ್ತು ಹಾಗೂ ಅಲ್ಲಿ ನೀಡಲಾಗಿದ್ದ ಮೊಬೈಲ್ ನಂಬರ್ 7890448206 ಗೆ ಕರೆ ಮಾಡಿ ವಿಚಾರಿಸಿ ಕಾರ್ಡ್ ಸ್ಕ್ರ್ಯಾಚ್ ಮಾಡಿದ ನಂತರ ಇದೇ ವಾಟ್ಸಪ್ ನಂಬರ್ಗೆ ದಾಖಲೆಗಳನ್ನು ಕಳುಹಿಸಲು ತಿಳಿಸಲಾಗಿತ್ತು.
ಸಂತ್ರಸ್ತ ಮಹಿಳೆ ಕಾರ್ಡ್ ಸ್ಕ್ರ್ಯಾಚ್ ಮಾಡಿದಾಗ ಅದರಲ್ಲಿ ಪ್ರಥಮ ಬಹುಮಾನ 1 ಮಹೀಂದ್ರ 95 ಕಾರ್ ಎಂದು ಬಂದಿತ್ತು. ತದನಂತರ ಅವರು ಹೇಳಿದಂತೆ ವಾಟ್ಸಪ್ಗೆ ದೂರುದಾರ ಮಹಿಳೆ ತಮ್ಮ ಪ್ಯಾನ್ ಕಾರ್ಡ್ ಹಾಗೂ ಒಂದು ಫೋಟೋವನ್ನು ಕಳುಹಿಸಿರುತ್ತಾರೆ. ನಂತರ ವಂಚಕರೇ ಸಂತ್ರಸ್ತ ಮಹಿಳೆ ನಂಬರ್ಗೆ ಕರೆ ಮಾಡಿ ನೀವು ಪ್ರಥಮ ಬಹುಮಾನ 1 ಮಹೀಂದ್ರ 95 ಕಾರ್ ವಿಜೇತರಾಗಿದ್ದೀರಿ, ನಿಮಗೆ ಕಾರ್ ಬೇಕಾ ಅಥವಾ ಕಾರಿನ ಮೌಲ್ಯದ 24,85,980 ರೂ. ಹಣವನ್ನು ಪಡೆದುಕೊಳ್ಳುತ್ತೀರಾ ಎಂದು ಕೇಳಿದ್ದಾರೆ.
ಆಗ ಸಂತ್ರಸ್ತ ಮಹಿಳೆ ತಮ್ಮ ಬಳಿ ಕಾರ್ ಇದೆ, ಹಣ ಕೊಡಿ ಎಂದು ಕೇಳಿಕೊಂಡಿದ್ದಾರೆ. ನಂತರ ಕಾರಿನ ಮೌಲ್ಯದ ಹಣವನ್ನು ಪಡೆಯಲು ವಿವಿಧ ಚಾರ್ಜಸ್ ನೀಡುವಂತೆ ಹೇಳಿ ಸಂತ್ರಸ್ತ ಮಹಿಳೆಯಿಂದ ಒಟ್ಟು 23,40,179 ರೂ. ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.
ತಮಗೆ ವಂಚನೆಯಾಗಿರುವುದನ್ನು ಅರಿತ ಸಂತ್ರಸ್ತ ಮಹಿಳೆ ಸೆಪ್ಟೆಂಬರ್ 30, 2026 ರಂದು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 318(4), 319(2) ಅಡಿ ಅಪರಿಚಿತ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
