ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಹೊಸದೊಂದು ಆತಂಕ ಶುರುವಾಗಿದೆ. ಸಾಗರದ ಬೇಸೂರಿನಲ್ಲಿ ಅಣು ಸ್ಥಾವರ ನಿರ್ಮಾಣ ಮಾಡಲಾಗ್ತಿದೆ. ಸಾವಿರ ಎಕೆರೆಗೂ ದೊಡ್ಡ ಜಾಗವನ್ನು ಅಣುಸ್ಥಾವರಕ್ಕೆ ನೀಡಲು ಈಗಾಗಲೇ ಡಿಸಿ ಲೆವಲ್ ಮೀಟಿಂಗ್ ನಡೆದಿದೆ ಎಂಬ ಸುದ್ದಿಯನ್ನು ನಿನ್ನೆ ದಿನದ ಸ್ಟೇಟ್ಪೇಪರ್ಗಳು ಲೀಡ್ ಮಾಡಿ ವರದಿ ಮಾಡಿದ್ದವು. ಇದು ಸ್ಥಳೀಯರಲ್ಲಿ ದಿಢೀರ್ ಶಾಕ್ ಮೂಡಿಸಿತ್ತು.
ಸಾಗರದಲ್ಲಿ ಅಣು ಸ್ಥಾವರ ನಿರ್ಮಾಣ ಆಗುತ್ತಾ
ಹೋಗಿ ಬಂದು ಮೂಗನ್ನೇ ಹಿಡ್ಕೊಂಡರು ಎಂಬಂತೆ ಈಗಾಗಲೇ ಶರಾವತಿ ಹೆಸರಲ್ಲಿ ಮುಳುಗಿಸಿರುವ ಸರ್ಕಾರ, ಬೆಂಗಳೂರಿಗೆ ನೀರು ತಗೊಂಡೋಗ್ತಿವಿ ಅಂತಿದೆ. ಇನ್ನೊಂದೆಡೆ ಬೇಡ ಬೇಡ ಎಂದರು ಶರಾವತಿಯ ನೀರನ್ನ ತಗ್ಗಿನಿಂದ ಮೇಲಕ್ಕೆ ಮತ್ತೆ ಪಂಪ್ ಮಾಡ್ತಿವಿ ಅಂತಾ ಇನ್ನೊಂದು ಪ್ರಾಜೆಕ್ಟ್ ಹಾಕ್ಕೊಂಡಿದೆ. ಅವೆಲ್ಲದರ ನಡುವೆ ಇದೀಗ ಸೀದಾ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿ ವಿಕಿರಣ ಬೂದಿ ಹಾರಿಸುವ ಯೋಜನೆಯ ಯೋಚನೆಯೊಂದು ಹೊರಬಿದ್ದಿದೆ. ಇದು ಸರಿಯೇ ತಪ್ಪೆ ಎನ್ನುವಷ್ಟರದಲ್ಲಿಯೇ ಜನಪ್ರತಿನಿದಿಗಳು ಪಕ್ಷಾತೀತವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬುದು ಮಾತ್ರ ಇಲ್ಲಿ ಸಮಾಧಾನದ ವಿಚಾರ.
ಏನಿದು ಸಾಗರದಲ್ಲಿ ಅಣು ಸ್ಥಾವರ ವಿಚಾರ
ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಕೇಂದ್ರ ಸರ್ಕಾರವು ಅಣು ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದು ವಿಚಾರ. ಸಾಗರ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಸೂರು ಗ್ರಾಮದಲ್ಲಿ ಈ ಬೃಹತ್ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಉದ್ದೇಶಿಸಿದೆ ಎಂದು ನಿನ್ನೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು.
ಸಾಗರದಲ್ಲಿ ಅಣು ಸ್ಥಾವರ : ಪ್ರಮುಖ ಅಂಶಗಳು
ಪತ್ರಿಕೆಗಳ ವರದಿಯ ಪ್ರಕಾರ, ಯೋಜನೆಗಾಗಿ ಒಟ್ಟು 1200 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಯೋಜಿಸಲಾಗಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸರ್ವೆ ನಂಬರ್ 104, 94, 80 ಹಾಗೂ 82 ರ ಅಡಿಯಲ್ಲಿ ಬರುವ ಅಂದಾಜು 485 ಎಕರೆ ಗೋಮಾಳ ಜಮೀನು, 900 ಎಕರೆ ಅರಣ್ಯ ಭೂಮಿ ಮತ್ತು ಕೆಲವು ಖಾಸಗಿ ಜಮೀನುಗಳನ್ನು ಈ ಯೋಜನೆಗೆ ಬಳಸಿಕೊಳ್ಳಲು ಗುರುತಿಸಲಾಗಿದೆ.
ಇದರ ಜೊತೆಗೆ, ಕಳೆದ ಕೆಲವು ದಿನಗಳಿಂದ ಸಾಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಿಮಾನಗಳು ನಿರಂತರವಾಗಿ ಹಾರಾಟ ನಡೆಸಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವುದು ಗ್ರಾಮಸ್ಥರ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.
ಅಣು ಸ್ಥಾವರ ಆದರೆ ಮಲೆನಾಡು ಸೂಕ್ಷ್ಮ ಪರಿಸರ ಪ್ರದೇಶ ಎಂದು ಕರೆಸಿಕೊಳ್ಳುವ ಬದಲಾಗಿ ಸೂಕ್ಷ್ಮ ವಿಕಿರಣ ಪ್ರದೇಶ ಎಂದು ಕರೆಸಿಕೊಳ್ಳುವ ಭೀತಿ ಇದೆ. ಹಾಗಾಗಿ ಇಂತಹದ್ದೊಂದು ಪ್ರಾಜೆಕ್ಟ್ ವಿರೋದಿಸಿದೇ ವಿಧಿಯಿಲ್ಲ ಎಂಬ ನಿರ್ಣಯಕ್ಕೆ ಬಂಧ ಕೋಳೂರು ಗ್ರಾಮಸ್ಥರು, ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ತುರ್ತು ಸಭೆಯೊಂದನ್ನು ಆಯೋಜಿಸಿದ್ದರು. ಯಾವುದೇ ಕಾರಣಕ್ಕೂ ತಮ್ಮ ನೆಲದಲ್ಲಿ ಅಣು ಸ್ಥಾವರ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಕೈಗೊಳ್ಳಲಾಗಿದೆ.
ಸಾಗರದಲ್ಲಿ ಅಣು ಸ್ಥಾವರ : ಶಾಸಕ ಗೋಪಾಲ ಕೃಷ್ಣ ಬೇಳೂರು ಎಂತಾ ಅಂದ್ರು
ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಯೋಜನೆಯ ಜಾಗದ ಬಗ್ಗೆ ಮೇಲಧಿಕಾರಿಗಳು ಮಾಹಿತಿ ಕೇಳಿರುವುದು ಸತ್ಯವಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಬೇಡಿಕೆ ಅಥವಾ ಆದೇಶ ಹೊರಬಿದ್ದಿಲ್ಲ, ಕೇವಲ ಜಾಗದ ವಿವರಗಳನ್ನು ಮಾತ್ರ ಪಡೆದುಕೊಳ್ಳಲಾಗಿದೆ . ಪ್ರಾಥಮಿಕ ಮಾಹಿತಿಯಂತೆ ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳನ್ನು ಗುರುತು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಅಣು ವಿದ್ಯುತ್ ಸ್ಥಾವರನ್ನ ಮಲೆನಾಡಿನಂತ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸುವುದು ಸರಿಯಲ್ಲ ಎಂದಿದ್ದಾರೆ.
ಸಾಗರದಲ್ಲಿ ಅಣು ಸ್ಥಾವರ : ಸಂಸದ ಬಿ.ವೈ ರಾಘವೇಂದ್ರರ ಸ್ಪಷ್ಟನೆ ಏನು
ಈ ನಿಟ್ಟಿನಲ್ಲಿ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ , ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ. ಈ ವಿಚಾರವಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಜೊತೆ ವಿಸ್ತೃತ ಚರ್ಚೆ ನಡೆಸಿದ್ದು, ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ ಎಂದು ಜಿಲ್ಲಾಧಿಕಾರಿಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟು, ಜಿಲ್ಲೆಯಲ್ಲಿ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.
ಶರಾವತಿ ಸಂತ್ರಸ್ತರಿಗೆ ಈವರೆಗೂ ಸಮರ್ಪಕವಾದ ಭೂಪರಿಹಾರ ಒದಗಿಸಲು ಸಾಧ್ಯವಾಗಿಲ್ಲ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರಕ್ಕೆ ಹಾನಿ ಉಂಟುಮಾಡುವ ಯಾವುದೇ ಯೋಜನೆಗೆ ತಮ್ಮ ಸ್ಪಷ್ಟ ವಿರೋಧವಿದೆ ಮತ್ತು ಜನರ ಹಿತಾಸಕ್ತಿ ಕಾಪಾಡಲು ತಾವು ಸದಾ ಬದ್ಧರಾಗಿರುತ್ತೇನೆ
ಬಿ.ವೈ. ರಾಘವೇಂದ್ರ, ಸಂಸದರು
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ಸಂಸ್ಥೆಯು ರಾಜ್ಯದಲ್ಲಿ ಅಣು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಉದ್ದೇಶದಿಂದ ವಿಜಯಪುರ, ಕೊಪ್ಪಳ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಿದೆ.
ಈ ಜಿಲ್ಲೆಗಳಲ್ಲಿ ಸೂಕ್ತ ಸ್ಥಳಗಳ ಆಯ್ಕೆಗಾಗಿ ಪ್ರಾಥಮಿಕ ಅಧ್ಯಯನಗಳು ಹಾಗೂ ಭೌಗೋಳಿಕ ಮತ್ತು ಭೂ-ವೈಜ್ಞಾನಿಕ ಪರಿಶೀಲನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕೆ ಸಾಕಷ್ಟು ಆತಂಕ, ಆರಂಭದಲ್ಲಿಯೇ ಮೂಡಿದೆ. ಈ ಸಲುವಾಗಿ ಮಲೆನಾಡು ಮತ್ತೊಂದು ದೊಡ್ಡ ಹೋರಾಟಕ್ಕೆ ಅಣಿಯಾಗುವ ಸಾದ್ಯಾಸಾಧ್ಯತೆ ಸ್ಪಷ್ಟವಾಗಿ ಕಾಣುತ್ತಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw