Rocking Star Yash Toxic / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಬಿಡುಗಡೆಯಾಗ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿಯು ಟಾಕ್ಸಿಕ್ ಫೀವರ್ ಶುರುವಾಗಿದೆ. ಅಲ್ಲದೆ ಯಶ್ ಅಭಿಮಾನಿಗಳ ಸಂಭ್ರಮ ಜೋರಾಗುತ್ತಿದೆ. ಇನ್ನೂ ಇದಕ್ಕೆ ಪೂರಕವಾಗಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ (ರಿ), ಶಿವಮೊಗ್ಗ ಘಟಕದ ವತಿಯಿಂದ ಇದೇ ಆಗಸ್ಟ್ 25 ಮತ್ತು 26 ರಂದು ಎರಡು ದಿನಗಳ ಕಾಲಸಂಭ್ರಮಾಚರಣೆ ಹಾಗೂ ಫ್ಯಾನ್ಸ್ ಶೋ ಏರ್ಪಡಿಸಲಾಗಿದೆ.
ನೆಚ್ಚಿನ ನಟನ ಚಿತ್ರಕ್ಕೆ ಅದ್ಧೂರಿ ವೆಲ್ಕಮ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಅಭಿಮಾನಿಗಳ ಸಂಘ ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದೆ. ಆಗಸ್ಟ್ 25, 2026 ರ ಭಾನುವಾರದಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ. ಅಂದು ಮಧ್ಯಾಹ್ನ ಸರಿಯಾಗಿ 2 ಗಂಟೆಗೆ ಕ್ರೇನ್ ಮೂಲಕ ಹಾರಗಳ ಮೆರವಣಿಗೆ ಹಾಗೂ ರ್‍ಯಾಲಿಯನ್ನು ಆಯೋಜಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುವ ಈ ರ್‍ಯಾಲಿ ಅಂತಿಮವಾಗಿ ಚಿತ್ರಮಂದಿರದ ಆವರಣದಲ್ಲಿ ನಿಲ್ಲಿಸಲಾಗುವ ನಟ ಯಶ್ ಅವರ ಕಟ್-ಔಟ್‌ಗೆ ಹಾರ ಹಾಕುವ ಮೂಲಕ ಸಮಾಪ್ತಿಗೊಳ್ಳಲಿದೆ. ಅದೇ ದಿನ ಸಂಜೆ 6 ಗಂಟೆಯಿಂದ ಯುವಜನತೆಗಾಗಿ ವಿಶೇಷ ಡಿಜೆ ಸೆಲೆಬ್ರೇಷನ್ ಏರ್ಪಡಿಸಲಾಗಿದ್ದು, ಯಶ್ ಚಿತ್ರಗಳ ಹಾಡುಗಳಿಗೆ ಅಭಿಮಾನಿಗಳು ಹೆಜ್ಜೆ ಹಾಕಲು ಸ್ಟೇಜ್ ನೀಡಲಾಗಿದೆ.
ಆಗಸ್ಟ್ 26, 2026 ರ ಸೋಮವಾರ ಟಾಕ್ಸಿಕ್ ಚಿತ್ರದ ಬಿಡುಗಡೆಯ ಸಂಭ್ರಮ ಇನ್ನಷ್ಟು ಕಳೆಗಟ್ಟಲಿದೆ. ಮುಂಜಾನೆ ಕೇವಲ 6 ಗಂಟೆಗೆ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಯಶ್ ಅಭಿಮಾನಿಗಳಿಗಾಗಿಯೇ ಪ್ರತ್ಯೇಕವಾದ ಟಾಕ್ಸಿಕ್ ಫ್ಯಾನ್ಸ್ ಶೋ ಆಯೋಜಿಸಲಾಗಿದೆ. ಬೆಳಗ್ಗಿನ ಜಾವವೇ ನೆಚ್ಚಿನ ನಟನ ದರ್ಶನ ಪಡೆಯಲು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ.
ಚಿತ್ರ ಪ್ರದರ್ಶನದ ಬಳಿಕ, ಅಂದು ಬೆಳಿಗ್ಗೆ 10:30 ಗಂಟೆಗೆ ಆಗಮಿಸುವ ಎಲ್ಲಾ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಯನ್ನು ಆಯೋಜಿಸಲಾಗಿದೆ. ಎರಡು ದಿನಗಳ ಅದ್ಧೂರಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಭಾಗದ ಎಲ್ಲಾ ಯಶ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ರೂಪುರೇಷೆಗಳು, ರ್‍ಯಾಲಿ, ಫ್ಯಾನ್ಸ್ ಶೋ ಟಿಕೆಟ್ ಅಥವಾ ಅನ್ನಸಂತರ್ಪಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಮುಖರಾದ ನಂದೀಶ್ (8722649339), ಆಂಜನೇಯ (7353702554), ಪುನೀತ್ (8660144379), ಯಶ್ವಂತ್ (8123707675) ಹಾಗೂ ವೆಂಕಟೇಶ್ (6360726635) ಅವರನ್ನು ನೇರವಾಗಿ ಸಂಪರ್ಕಿಸುವಂತೆ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ, ಶಿವಮೊಗ್ಗ ಘಟಕದ ಪ್ರಕಟಣೆಯಲ್ಲಿ ಕೋರಲಾಗಿದೆ.
