ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರದ ಖಜಾನೆಗೆ ತೂತು ಬಿದ್ದು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಬಿಜೆಪಿ ಒಬಿಸಿ (OBC) ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಗಂಭೀರ ಆರೋಪ ಮಾಡಿದ್ದಾರೆ. ಶಿವಮೊಗ್ಗದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎನ್ನುವುದಾದರೆ ತಕ್ಷಣವೇ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ 2,000 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಸಂಘಟನಾತ್ಮಕವಾಗಿ ತಾವು ರಾಜ್ಯ ಪ್ರವಾಸ ಕೈಗೊಂಡಿದ್ದು, ಉತ್ತರ ಕರ್ನಾಟಕ ಭಾಗಕ್ಕೂ ಭೇಟಿ ನೀಡಿ ಬಂದಿದ್ದೇನೆ ಆದರೆ ಆ ಭಾಗದಲ್ಲಿ ಅಭಿವೃದ್ಧಿ ಸಂಪೂರ್ಣ ಶೂನ್ಯವಾಗಿದೆ ಎಂದು ಅವರು ಕಿಡಿಕಾರಿದರು. ರಾಜ್ಯದಲ್ಲಿ ಬರಗಾಲದ ಛಾಯೆಯಿಂದಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅಲ್ಪಸಂಖ್ಯಾತರನ್ನು ಅಟ್ಟಕ್ಕೇರಿಸಿ, ಹಿಂದುಳಿದ ವರ್ಗಗಳನ್ನು ಹಿಂದಕ್ಕೆ ತುಳಿಯುವುದೇ ಈ ಸರ್ಕಾರದ ಅಹಿಂದ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಅಹಿಂದ ಹೆಸರಿನಲ್ಲಿ ಎಲ್ಲಾ ಸಮಾಜಗಳು ಕಳೆದು ಹೋಗಿದ್ದು, ಹಿಂದುಳಿದ ಸಮಾಜಗಳಿಗೆ ಒಂದೇ ಒಂದು ಹೊಸ ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂದು ದೂರಿದರು.
ಅಲೆಮಾರಿ ಸಮುದಾಯ ಸೇರಿದಂತೆ ಕಾಯಕ ಸಮಾಜಗಳಿಗೆ ಯಾವುದೇ ಅನುದಾನ ನೀಡಿಲ್ಲ ಮತ್ತು ದೇವರಾಜ ಅರಸು ನಿಗಮಕ್ಕೆ ಕೇವಲ 125 ಕೋಟಿ ರೂಪಾಯಿ ಮಾತ್ರ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಮಧು ಬಂಗಾರಪ್ಪ ಅವರು ಬರೀ ಮಾತಾಡುತ್ತಾರೆಯೇ ಹೊರತು, ಸ್ವತಃ ತಮ್ಮದೇ ಸಮುದಾಯದ ನಿಗಮಕ್ಕೂ ಸರಿಯಾದ ಅನುದಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಒಂದು ವೇಳೆ ಹಿಂದುಳಿದ ನಿಗಮಗಳಿಗೆ 2,000 ಕೋಟಿ ರೂ. ಬಿಡುಗಡೆ ಮಾಡದಿದ್ದರೆ ಈ ಸಮುದಾಯಗಳ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದು ಎಚ್ಚರಿಸಿದರು.
ಪರಿಶಿಷ್ಟರಿಗೆ ಕಾಯ್ದೆ ತಂದ ಮಾದರಿಯಲ್ಲೇ ಹಿಂದುಳಿದ ವರ್ಗಗಳಿಗೂ ವಿಶೇಷ ಕಾಯ್ದೆ ತರಬೇಕು ಎಂದು ಒತ್ತಾಯಿಸಿದ ರಘು ಕೌಟಿಲ್ಯ, ರಾಹುಲ್ ಗಾಂಧಿ ಹೇಳಿದರು ಎಂಬ ಕಾರಣಕ್ಕೆ ಕಾಂತರಾಜ್ ಆಯೋಗದ ವರದಿಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ಮಧುಸೂದನ್ ನಾಯ್ಕ್ ವರದಿಯನ್ನು ಕೂಡಲೇ ಬಿಡುಗಡೆಗೊಳಿಸಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಬಗ್ಗೆ ಕೇವಲ ಭಾಷಣ ಮಾಡುವ ಸರ್ಕಾರಗಳು ಈ ಸಮುದಾಯಗಳಿಗೆ ಏನನ್ನೂ ನೀಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಿಂದುಳಿದವರಿಗೆ ಏನು ಮಾಡಿದ್ದೀರಿ ಎಂಬುದನ್ನು ಬಹಿರಂಗಪಡಿಸಲಿ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ನಮ್ಮ ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದ ಅವರು, ಅಭದ್ರತೆಯ ಸ್ಥಿತಿಯಲ್ಲಿರುವ ಎಲ್ಲಾ ಸಮುದಾಯಗಳ ಜೊತೆಗೆ ಬಿಜೆಪಿ ಸದಾ ನಿಲ್ಲಲಿದೆ ಹಾಗೂ 2028ರ ಚುನಾವಣೆಯಲ್ಲಿ ಹಿಂದುಳಿದ ಸಮುದಾಯಗಳು ತಮ್ಮ ಶಕ್ತಿ ಏನೆಂಬುದನ್ನು ಸರ್ಕಾರಕ್ಕೆ ತೋರಿಸಲಿವೆ ಎಂದು ಭವಿಷ್ಯ ನುಡಿದರು.
