ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಆನ್‌ಲೈನ್ ಟ್ರೇಡಿಂಗ್ನಿಂದಾಗಿ ಸೈಬರ್ ವಂಚಕರ ಬಲೆಗೆ ಬಿದ್ದು ಬರೋಬ್ಬರಿ 31.35 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬಗ್ಗೆ ಸಿಇಎನ್ ಠಾಣೆಯಲ್ಲಿ ಕಂಪ್ಲೆಂಟ್ ಆಗಿದೆ. ಅಪರಿಚಿತರು ಕಳುಹಿಸಿದ ಸಂದೇಶವನ್ನು ನಂಬಿ, ಕಷ್ಟಪಟ್ಟು ದುಡಿದಿದ್ದ ಹಣವನ್ನು ಕಳೆದುಕೊಂಡ ಸಂತ್ರಸ್ತರು ಇದೀಗ ಪರಿತಪಿಸುವಂತಾಗಿದೆ.
ನಡೆದಿದ್ದು ಹೀಗಿದೆ
ಆರಂಭದಲ್ಲಿ ಸಂತ್ರಸ್ತ ವೃದ್ಧರೊಬ್ಬರ ಮೊಬೈಲ್ ಸಂಖ್ಯೆಗೆ ಆನ್‌ಲೈನ್ ಟ್ರೇಡಿಂಗ್ ಕುರಿತಂತೆ ಮೇಸೆಜ್ ಒಂದು ಬಂದಿದೆ. ಅದನ್ನ ಕ್ಲಿಕ್ ಮಾಡಿದ ದೂರುದಾರರು ವಾಟ್ಸಾಪ್ ಗ್ರೂಪ್ವೊಂದಕ್ಕೆ ಆಡ್ ಆಗಿದ್ದಾರೆ. ಬಳಿಕ ನಿರ್ದಿಷ್ಟ ಕಂಪನಿಯೊಂದರಲ್ಲಿ ಹಣ ಹಾಕಿದ್ರೆ, ಅಧಿಕ ಲಾಭ ಪಡೆಯಬಹುದು ಎಂಬ ವಿಚಾರ ಇವರ ಗಮನ ಸೆಳೆದಿದೆ. ಅಲ್ಲದೆ ಲಾಭಾಂಶ ಹಂಚಿಕೆಯಾಗಿದೆ ಎಂದು ಬ್ಯಾಂಕ್ ಖಾತೆಗೆ ಹಣ ಜಮೆಯಾಗಿರುವ ಸ್ಕ್ರೀನ್ ಶಾಟ್‌ಗಳು ಸಂತ್ರಸ್ತರಿಗೆ ನಂಬಿಕೆ ಹುಟ್ಟಿಸಿದೆ.
ನಂತರ ದೂರುದಾರರು ಆಗಸ್ಟ್ 6 ರಿಂದ ಸೆಪ್ಟೆಂಬರ್ 16 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 31.35 ಲಕ್ಷ ರೂ. ಹಣವನ್ನ ಹೂಡಿಕಿಎ ಮಾಡಿದ್ದಾರೆ. ಅವರಿಗೆ ನಿರೀಕ್ಷಿತ ಲಾಭವೂ ಕಂಡಿದೆ. ಆದರೆ ಯಾವಾಗ ಹೂಡಿಕೆ ಮಾಡಿದ್ದ ಹಣ ಹಾಗೂ ಲಾಭಾಂಶವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ವಂಚಕರ ಅಸಲಿ ಬಣ್ಣ ಬಯಲಾಗಿದೆ.
ಹಣವನ್ನು ಹಿಂಪಡೆಯಲು ಮುಂದಾದಾಗ, ನಿಮ್ಮ ಹೂಡಿಕೆಯ ಮೇಲೆ ಶೇ. 200 ಕ್ಕಿಂತ ಹೆಚ್ಚಿನ ಲಾಭಾಂಶ ಬಂದಿದೆ. ಹೀಗಾಗಿ ನಿಯಮಗಳ ಪ್ರಕಾರ ಶೇ. 20 ರಷ್ಟು ತೆರಿಗೆ ಮತ್ತು ಸೇವಾ ಶುಲ್ಕವನ್ನು ಮೊದಲು ಪಾವತಿಸಬೇಕು. ಈ ಶುಲ್ಕವನ್ನು ಕಟ್ಟದಿದ್ದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ವಂಚಕರು ಹೊಸ ಷರತ್ತು ವಿಧಿಸಿದ್ದಾರೆ.
ಇದರಿಂದ ಅನುಮಾನಗೊಂಡ ವೃದ್ಧರು, ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
