ಶಿವಮೊಗ್ಗ : ರೈತರು ಹೋರಾಟಕ್ಕಿಳಿಯುವ ಮುನ್ನ  ವಿಮಾ ಕಂಪನಿಗಳು ಘೋಷಿಸಿದ ಪರಿಹಾರ ಮೊತ್ತವನ್ನು ನೀಡಿ : ಬಿವೈ ರಾಘವೇಂದ್ರ ಆಗ್ರಹ

ಹಂಚಿಕೊಳ್ಳಿ
WhatsApp Facebook X Telegram
MP Raghavendra Demands Fair Crop Insurance Payouts
MP Raghavendra Demands Fair Crop Insurance Payouts

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬೆಳೆ ವಿಮಾ ಕಂಪನಿಗಳು ಘೋಷಿಸಿರುವ ಪರಿಹಾರ ಮೊತ್ತ ಅತ್ಯಂತ ಕಡಿಮೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬೆಳೆ ವಿಮೆ ಪಾವತಿ ಕುರಿತ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಡಲೇ ಈ ದೋಷಗಳನ್ನು ಸರಿಪಡಿಸಿ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸುವಂತೆ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ನೂರಕ್ಕೂ ಅಧಿಕ ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿರುವುದರಿಂದ ಮಳೆಯ ಸರಿಯಾದ ಮಾಹಿತಿ ದಾಖಲಾಗದೆ, ವಿಮಾ ಮೊತ್ತದ ಅಂದಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಅನ್ನದಾತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದ ಅವರು, ರೈತರು ಹೋರಾಟಕ್ಕಿಳಿಯುವ ಮುನ್ನವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವಂತೆ ಆಗ್ರಹಿಸಿದರು .

ಖಾಸಗಿ ಸಂಸ್ಥೆಗಳು ಅಥವಾ ಪರ್ಯಾಯ ಮೂಲಗಳಿಂದ ದಾಖಲಾಗಿರುವ ಮಳೆ ಪ್ರಮಾಣದ ವರದಿಯನ್ನು ಪರಿಗಣಿಸಿ ಪರಿಹಾರ ಘೋಷಿಸಬೇಕು. ವಿಮಾ ಕಂಪನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮತ್ತು ರೈತರಿಂದ ಪಡೆದ ವಂತಿಗೆಯ ಮೊತ್ತಕ್ಕೆ ಹೋಲಿಸಿದರೆ ನೀಡುತ್ತಿರುವ ಪರಿಹಾರ ತೀರಾ ಕಡಿಮೆಯಿದ್ದು, ಕಂಪನಿಗಳು ಲಾಭದಾಯಕವಾಗಿ ಕಾರ್ಯಾಚರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರ.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಸ್ತಿತ್ವದಲ್ಲಿರುವ ಮಳೆ ಮಾಪನ ಕೇಂದ್ರಗಳ ಸಮಗ್ರ ವರದಿ ಪಡೆದು ತುಲನಾತ್ಮಕವಾಗಿ ಪರಿಶೀಲಿಸಿ ವಾಸ್ತವಿಕ ಮಳೆ ಪ್ರಮಾಣವನ್ನು ನಿಗಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಈ ಸಂಪೂರ್ಣ ವಿಚಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳಲ್ಲಿ ದೋಷಪೂರಿತ ಮಳೆ ಮಾಪನ ಕೇಂದ್ರಗಳಿಂದಾಗಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ವಿಮಾ ಕಂಪನಿಗಳ ನಿರಂತರ ಲೋಪಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡರಾದ ಕೆ.ವಿ.ಕೃಷ್ಣಮೂರ್ತಿ ಮತ್ತು ಮಲ್ಲಿಕಾರ್ಜುನ ಹಕ್ರೆ ಸಭೆಯಲ್ಲಿ ಆಗ್ರಹಿಸಿದರು. ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ ವಿ., ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ವಿವಿಧ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor