ಮಲೆನಾಡು ಟುಡೆ ಸುದ್ದಿ / ಮಂಡ್ಯ / ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬಿಣದ ಆಂಗಲ್‌ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮಂಡ್ಯ ಜಿಲ್ಲೆಯ ಸ್ಥಳೀಯ ವರದಿಗಾರ ಯತೀಶ್ ಮಲೆನಾಡು ಟುಡೆಗೆ ನೀಡಿದ ಪ್ರಕಾರ, ನಾಗಮಂಗಲ ತಾಲೂಕಿನ ವರಾಹಸಂದ್ರ ಸಮೀಪದ ದೇವಿರಹಳ್ಳಿ ಜಂಕ್ಷನ್ ಬಳಿ ಮಧ್ಯಾಹ್ನ ಸುಮಾರು 12:30ರ ವೇಳೆಗೆ ಅಪಘಾತ ಸಂಭವಿಸಿದೆ. ಮೃತಪಟ್ಟ KSRTC ಬಸ್ ಚಾಲಕನನ್ನು ಹೊಳೆನರಸೀಪುರ ಡಿಪೋಗೆ ಸೇರಿದ ಶೇಖರ್ ಎಂ.ಡಿ. ಎಂದು ಗುರುತಿಸಲಾಗಿದೆ.
ಕಬ್ಬಿಣದ ಆಂಗಲ್‌ಗಳನ್ನು ತುಂಬಿಕೊಂಡಿದ್ದ ಟ್ರ್ಯಾಕ್ಟರ್ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿತ್ತು. ಇದೇ ಮಾರ್ಗದಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಟ್ರ್ಯಾಕ್ಟರ್ ಅನ್ನು ಓವರ್‌ಟೇಕ್ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ. ಈ ವೇಳೆ ಬಸ್ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗುತ್ತಿದ್ದ ಕಬ್ಬಿಣದ ಆಂಗಲ್‌ಗಳು ಬಸ್ಸಿನ ಮುಂಭಾಗದ ಮೂಲಕ ಒಳಗೆ ನುಗ್ಗಿವೆ. ಪರಿಣಾಮ ಚಾಲಕ ಶೇಖರ್ ಎಂ.ಡಿ. ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಮುಂಭಾಗಕ್ಕೂ ತೀವ್ರ ಹಾನಿಯಾಗಿದೆ.
