
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಸರ್ಕಾರದ ಆದೇಶದಂತೆ ರಾಜ್ಯದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂಬ ನಿಯಮವಿದ್ದರೂ, ಶಿವಮೊಗ್ಗದ ಕೋಟಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ನಗರದ ಶಾಸಕರಾದ ಎಸ್. ಚನ್ನಬಸಪ್ಪ ಅವರ ಸೂಚನೆಯಂತೆ ಗೀತೆಯನ್ನು ಪೂರ್ಣವಾಗಿ ಹಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಜಿಲ್ಲಾಧಿಕಾರಿಗೆ ದೂರು ನೀಡಿದೆ.
ಅಕ್ಟೋಬರ್ 11, 2026ರ ಭಾನುವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲಾಗಿದ್ದು, ಇದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಸಿ. ಯೋಗೇಶ್ ಹಾಗೂ ಪಕ್ಷದ ಪ್ರಮುಖರು ಸಭೆಯಿಂದ ಹೊರನಡೆದು ಸಭತ್ಯಾಗ ಮಾಡಿದ್ದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಉಪಸ್ಥಿತರಿದ್ದರೂ, ಪೂರ್ಣ ಗೀತೆ ಹಾಡುವುದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಪತ್ರದಲ್ಲಿ ದೂರಲಾಗಿದೆ. ಈ ದಸರಾ ಕಾರ್ಯಕ್ರಮವನ್ನು ಜಿಲ್ಲಾ ಆಡಳಿತವೇ ವಹಿಸಿಕೊಂಡು ನಡೆಸುವಂತಾಗಬೇಕು ಹಾಗೂ ಈ ಕಾರ್ಯಕ್ರಮವನ್ನು ಬಿ.ಜೆ.ಪಿ ಕಾರ್ಯಕ್ರಮವನ್ನಾಗಿ ರೂಪಿಸಲು ಪ್ರಯತ್ನಿಸುತ್ತಿರುವ ಎಲ್ಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.


