ಮಲೆನಾಡು ಟುಡೆ ಸುದ್ದಿ / ಬೀರೂರು /ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೀರೂರಿನ ಪಲ್ಸ್ ಕ್ಲಬ್ ಮುಂಭಾಗದಲ್ಲಿ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದಲ್ಲಿ ಬ್ಯಾಗಡೇಹಳ್ಳಿ ಗ್ರಾಮದ ಇಬ್ಬರು ಯುವಕರು ಜೀವ ಕಳೆದುಕೊಂಡಿದ್ದಾರೆ.
ಬ್ಯಾಗಡೇಹಳ್ಳಿ ಗ್ರಾಮದ ಅಜಯ್ ಬಿ.ಎಸ್. (27) ಹಾಗೂ ಗಿರೀಶ್ (22) ಮೃತಪಟ್ಟವರು. ಇಬ್ಬರೂ ಬೈಕ್ನಲ್ಲಿ ಬಿಳುವಾಲದಿಂದ ಬ್ಯಾಗಡೇಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪಲ್ಸ್ ಕ್ಲಬ್ ಮುಂಭಾಗ ಬೈಕ್ ಸಾಗುತ್ತಿದ್ದ ವೇಳೆ, ಬೀರೂರಿನಿಂದ ಅತಿವೇಗದಲ್ಲಿ ಬಂದ ಸಾರಿಗೆ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಬೈಕ್ನಲ್ಲಿದ್ದ ಅಜಯ್ ಮತ್ತು ಗಿರೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದಲ್ಲಿ ಇಬ್ಬರೂ ಯುವಕರ ತಲೆ, ಮುಖ ಹಾಗೂ ಮೈಕೈಗೆ ತೀವ್ರ ಪೆಟ್ಟಾಗಿದ್ದು, ಗಾಯಗಳ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಡರಾತ್ರಿ ನಡೆದ ಈ ರಸ್ತೆ ಅಪಘಾತದಲ್ಲಿ ಬ್ಯಾಗಡೇಹಳ್ಳಿ ಗ್ರಾಮದ 27 ವರ್ಷದ ಅಜಯ್ ಹಾಗೂ 22 ವರ್ಷದ ಗಿರೀಶ್ ಮೃತಪಟ್ಟಿರುವುದು ವರದಿಯಾಗಿದೆ.
