ಶಿವಮೊಗ್ಗ | ಮಲೆನಾಡುಟುಡೆ ನ್ಯೂಸ್ : ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಹಾಗೂ ಅವರ ಸಚಿವ ಸ್ಥಾನದ ಕುರಿತು ವಿಪಕ್ಷಗಳು ಚರ್ಚೆ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಆದರೆ ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಅವುಗಳ ಕುರಿತಾಗಿಯೂ ವಿಪಕ್ಷಗಳು ಶಾಸನಸಭೆಯಲ್ಲಿ ಚರ್ಚಿಸಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಿಬಿಐ ಹಾಗೂ ಇಡಿ ಸಂಸ್ಥೆಗಳಿಂದ ಸೂಕ್ತ ತನಿಖೆಯಾಗಿದ್ದು, ಕಾನೂನು ನಿಯಮಗಳಂತೆಯೇ ಅವರಿಗೆ ಪುನಃ ಸಚಿವ ಸ್ಥಾನ ನೀಡಲಾಗಿದೆ. ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ಕಾನೂನಾತ್ಮಕವಾಗಿಯೇ ಸೂಕ್ತ ಉತ್ತರ ನೀಡಲಿದ್ದೇವೆ ಎಂದು ಹೇಳಿದರು.
ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ರಾಜಕೀಯ ಇತಿಹಾಸವನ್ನು ಕೆದಕಿದರೆ ವಾಷಿಂಗ್ ಮಿಷನ್ ರಾಜಕಾರಣದ ವಿಚಾರಗಳು ಮುನ್ನೆಲೆಗೆ ಬರಲಿವೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯಲ್ಲೇ ಬಿಜೆಪಿಯವರು ರಾಜ್ಯದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಹಿಂದುತ್ವದ ಜಪ ಮಾಡುವವರು ರಾಮನ ಖಜಾನೆಯನ್ನೇ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಚೌಕಿದಾರ್ ಎಂದು ಹೇಳಿಕೊಳ್ಳುವವರೇ ಕಳ್ಳತನಕ್ಕೆ ಇಳಿದರೆ ಹೇಗೆ ಎಂಬುದು ಸೇರಿದಂತೆ ಹಲವು ಸಾರ್ವಜನಿಕ ವಿಚಾರಗಳು ಸದನದಲ್ಲಿ ಸುದೀರ್ಘವಾಗಿ ಚರ್ಚೆಯಾಗಬೇಕಿದೆ ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡ ಸಚಿವರು, ರಾಜ್ಯದ ಸರ್ಕಾರಿ ಶಾಲೆಗಳ ಸಮಗ್ರ ನಿರ್ವಹಣೆಗೆ ಸರ್ಕಾರ ಈಗಾಗಲೇ ಅಗತ್ಯ ಹಣಕಾಸಿನ ಸೌಲಭ್ಯಗಳನ್ನು ನಿಗದಿಪಡಿಸಿದೆ ಎಂದರು. ಶಾಲೆಗಳಲ್ಲಿ ಯಾವುದೇ ಮೂಲಸೌಕರ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ತೊಡಕುಗಳಿದ್ದರೆ ಸಾರ್ವಜನಿಕರು ತಮ್ಮ ಗಮನಕ್ಕೆ ತರಬಹುದು, ತಕ್ಷಣವೇ ಪರಿಹಾರ ಕಲ್ಪಿಸಲಾಗುವುದು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಕ್ತ ಬಸ್ ಸೌಕರ್ಯ ಒದಗಿಸಿಲ್ಲ ಹಾಗೂ ಅಗತ್ಯ ಶಿಕ್ಷಕರ ನೇಮಕಾತಿಯನ್ನೂ ಮಾಡಿಲ್ಲ ಆ ಆಡಳಿತಾತ್ಮಕ ವೈಫಲ್ಯಗಳ ಹೊರೆ ಈಗ ತಮ್ಮ ಸರ್ಕಾರದ ಮೇಲೆ ಬೀಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮನ್ನು ಅಡ್ಜಸ್ಟ್ಮೆಂಟ್ ರಾಜಕಾರಣಿ ಎಂದು ಟೀಕಿಸಿದ್ದ ಸಹೋದರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಮಧು ಬಂಗಾರಪ್ಪ, ಬಿಜೆಪಿ ಪಕ್ಷದಲ್ಲಿ ಯಾವುದೇ ಸೂಕ್ತ ದಿಕ್ಕು-ದೆಸೆ ಇಲ್ಲದೆ ಅವರು ಎಲ್ಲಿ ಕೂತಿದ್ದಾರೆ ಎಂಬುದನ್ನು ಒಮ್ಮೆ ನೋಡಲಿ ಎಂದರು. ಅಂತಹ ಹೊಲಸು ಹಾಗೂ ವ್ಯರ್ಥ ಮಾತುಗಳಿಗೆ ಉತ್ತರ ಕೊಟ್ಟು ಸಮಯ ಹಾಳುಮಾಡಲು ನಾನು ಬಯಸುವುದಿಲ್ಲ. ಸಂಪೂರ್ಣವಾಗಿ ತುಕ್ಕು ಹಿಡಿದಿರುವ ಗಿರಾಕಿಗೆ ಉತ್ತರ ನೀಡುವುದು ಅನಗತ್ಯ ಎಷ್ಟೇ ತಿಕ್ಕಿದರೂ ತುಕ್ಕು ಹಿಡಿದಿರುವುದು ಬದಲಾಗುವುದಿಲ್ಲ ಎಂದರು.
