ಮಲೆನಾಡು ಟುಡೆ ಸುದ್ದಿ / ಕುಂದಾಪುರ / ಉಡುಪಿ ಜಿಲ್ಲೆ ಕುಂದಾಪುರದಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ. ಪತ್ನಿಗೆ ವಿಷಕಾರಿ ಇಂಜೆಕ್ಷನ್ ಕೊಡಿಸಿ ಹತ್ಯೆ ಮಾಡಲು ಯತ್ನಿಸಿದ್ದ ಎನ್ನಲಾದ ಆಟೋ ಚಾಲಕ, ಬಳಿಕ ವಿಷಯ ಬಯಲಾಗುವ ಭೀತಿಯಲ್ಲಿ ಪ್ರೇಯಸಿಯೊಂದಿಗೆ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ದಿನ ವರದಿಯಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಸೌಪರ್ಣಿಕಾ ನದಿ ತೀರದ ಚಾರ್ಸಾಲ್‌ನಲ್ಲಿ ಈ ಘಟನೆ ನಡೆದಿದೆ.ಸ್ಥಳೀಯ ವರದಿ ಪ್ರಕಾರ, ವಿಠಲನಾಯ್ಕ (35) ಹಾಗೂ ಭವ್ಯಾ ಸಮಗಾರ್ತಿ (33) ಆತ್ಮಹತ್ಯೆ ಮಾಡಿಕೊಂಡವರು.

ವಿಠಲನಾಯ್ಕ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದ. ಇತ್ತ ಭವ್ಯಾ ಸಮಗಾರ್ತಿಯೊಂದಿಗೆ ಸಂಬಂಧ ಹೊಂದಿದ್ದ . ಪ್ರೇಯಸಿಗಾಗಿ ಪತ್ನಿಯನ್ನು ಹತ್ಯೆ ಮಾಡಲು ವಿಠಲನಾಯ್ಕ ಸಂಚು ರೂಪಿಸಿದ್ದ , ಇದರ ಭಾಗವಾಗಿ ಭವ್ಯಾಳನ್ನು ತನ್ನ ಪತ್ನಿಗೆ ನರ್ಸ್ ಎಂದು ಪರಿಚಯಿಸಿ, ಆಕೆಯಿಂದ ಪತ್ನಿಗೆ ವಿಷಕಾರಿ ಇಂಜೆಕ್ಷನ್ ಕೊಡಿಸಿದ್ದ. ಈ ಘಟನೆಯಲ್ಲಿ ಅಸ್ವಸ್ಥಗೊಂಡಿದ್ದ ಪತ್ನಿ, ಮಣಿಪಾಲ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದರು.
ಹೀಗೆ ಪತ್ನಿ ಬದುಕುಳಿದು ಚೇತರಿಸಿಕೊಂಡ ಹಿನ್ನೆಲೆಯಲ್ಲಿ ತಾವು ರೂಪಿಸಿದ್ದ ಸಂಚು ಬಯಲಾಗಬಹುದು ಎಂಬ ಭಯಕ್ಕೆ ವಿಠಲನಾಯ್ಕ ಮತ್ತು ಭವ್ಯಾ ಅಲ್ಲಿಂದ ಪರಾರಿಯಾಗಿದ್ದರು. ನಂತರ ಉಡುಪಿ ಜಿಲ್ಲೆಯ ಕುಂದಾಪುರ ವ್ಯಾಪ್ತಿಯ ಸೌಪರ್ಣಿಕಾ ನದಿ ತೀರದ ಚಾರ್ಸಾಲ್‌ನ ಕಾಡು ಪ್ರದೇಶದಲ್ಲಿ ವಿಠಲನಾಯ್ಕ ಮತ್ತು ಭವ್ಯಾ ಸಮಗಾರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
