ಮಲೆನಾಡು ಟುಡೆ ಸುದ್ದಿ / ನವದೆಹಲಿ / ಎಲ್‌ಪಿಜಿ ಸಿಲಿಂಡರ್ ವಿಷಯದಲ್ಲಿ ಚೂರು ಗ್ರಾಹಕರಿಗೆ ಅನುಕೂಲವಾಗುವ ಸುದ್ದಿಯೊಂದು ಬಂದಿದೆ. ದುಡ್ಡು ಅಡ್ಜೆಸ್ಟ್ ಆಗದ ಕಾಲಕ್ಕೆ ಗ್ಯಾಸ್ ಖಾಲಿಯಾದರೆ, ಅದನ್ನ ಇಎಂಐ ಮೂಲಕ ಪಡೆಯಬಹುದು. ಅಂತಹದ್ದೊಂದು ಅವಕಾಶವನ್ನ ಭಾರತ್ ಗ್ಯಾಸ್ ನೀಡುತ್ತಿದೆ.
ಹೌದು, ಈ ಕುರಿತು ಭಾರತ್ ಗ್ಯಾಸ್ ತನ್ನ ಎಕ್ಸ್ ಅಕೌಂಟ್ನಲ್ಲಿ ಬರೆದುಕೊಂಡಿದೆ . ಅದರ ಪ್ರಕಾರ, ಸಿಲಿಂಡರ್ ಬುಕ್ಕಿಂಗ್ ಮಾಡುವ ಸಮಯದಲ್ಲಿ ಪೂರ್ಣ ಹಣ ಪಾವತಿಸಲು ಸಾಧ್ಯವಾಗದ ಗೃಹ ಬಳಕೆ ಗ್ರಾಹಕರಿಗೆ ಭಾರತ್ ಗ್ಯಾಸ್ ಹೊಸ ಸೌಲಭ್ಯ ಘೋಷಿಸಿದೆ. ಎಲ್‌ಪಿಜಿ ಸಿಲಿಂಡರ್ ರಿಫಿಲ್ಲಿಂಗ್ಗೆ ಗ್ರಾಹಕರಿಗೆ ಬಡ್ಡಿರಹಿತ ಮೈಕ್ರೋ ಸಾಲ ನೀಡಲಾಗುತ್ತಿದ್ದು, ಇದರ ಮೂಲಕ ಸಿಲಿಂಡರ್ ಪಡೆಯುವಾಗಲೇ ಸಂಪೂರ್ಣ ಹಣ ಪಾವತಿಸುವ ಬದಲು ಕಂತುಗಳಲ್ಲಿ ಹಣ ಕಟ್ಟಬಹುದಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗೂ ಸಿಗಲಿದೆ ಇಎಂಐ
ಈ ಸೌಲಭ್ಯದ ಕುರಿತು ಭಾರತ್ ಗ್ಯಾಸ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಸದ್ಯ 14.2 ಕೆ.ಜಿ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸುಮಾರು ₹950ರಷ್ಟಿದೆ ಎಲ್‌ಪಿಜಿ ಸಿಲಿಂಡರ್ ಮರುಭರ್ತಿಗಾಗಿ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಅರ್ಹ ಗ್ರಾಹಕರು ಸಿಲಿಂಡರ್ ರೀಫಿಲ್‌ಗೆ ₹600ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದಾಗಿದೆ.
₹600 ಸಾಲ ಪಡೆದ ಗ್ರಾಹಕರು ಒಮ್ಮೆಯೇ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಪ್ರತಿ ವಾರ ₹100ರಂತೆ 6 ವಾರಗಳಲ್ಲಿ ಸಾಲದ ಹಣವನ್ನು ಮರುಪಾವತಿಸಬಹುದು. ಈ ಮೊತ್ತದ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ ಎಂದು ಭಾರತ್ ಗ್ಯಾಸ್ ತಿಳಿಸಿದೆ.
ಇದರಿಂದ ಬುಕ್ಕಿಂಗ್ ಸಮಯದಲ್ಲಿ ಪೂರ್ಣ ಹಣ ಲಭ್ಯವಿಲ್ಲದಿದ್ದರೂ ಸಿಲಿಂಡರ್ ಪಡೆಯಲು ಗ್ರಾಹಕರಿಗೆ ಅವಕಾಶ ದೊರೆಯಲಿದೆ.
ಈ ಸೌಲಭ್ಯ ಪಡೆಯಲು ಗ್ರಾಹಕರು ತಮ್ಮ ಸಮೀಪದ ಭಾರತ್ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.
ಭಾರತ್ ಗ್ಯಾಸ್ ಈ ಯೋಜನೆಯನ್ನು ವನ್‌ಗೋ ಫಿನ್‌ಟೆಕ್ ಸಹಯೋಗದಲ್ಲಿ ಒದಗಿಸುತ್ತಿದೆ. ಸಾಲದ ಅಗತ್ಯವಿರುವ ಗ್ರಾಹಕರು ತಮ್ಮ ಎಲ್‌ಪಿಜಿ ಏಜೆನ್ಸಿಯನ್ನು ಸಂಪರ್ಕಿಸಿದರೆ, ಸಾಲ ಪಡೆಯುವ ವಿಧಾನ ಹಾಗೂ ಅಗತ್ಯ ಪ್ರಕ್ರಿಯೆಗಳ ಕುರಿತು ಸಂಬಂಧಪಟ್ಟ ಏಜೆನ್ಸಿಯಿಂದ ಮಾಹಿತಿ ಪಡೆಯಬಹುದಾಗಿದೆ.
