Karnataka Government : ರಾಜ್ಯದಲ್ಲಿನ ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಗುಂಡಿಮಯವಾಗಿವೆ ಹಾಗೂ ರಾಜ್ಯ ಸರ್ಕಾರವು ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಎಲ್ಲಾ ಪರಿಸ್ಥಿತಿಗಳನ್ನು ಗಮನಿಸಿದರೆ, ಇದು ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಎಂದು ಅವರು ವ್ಯಂಗ್ಯವಾಡಿದರು.
ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯಾವ ಭಾಗದಲ್ಲಿ ನೋಡಿದರೂ ರಸ್ತೆಗಳಲ್ಲಿ ಗುಂಡಿಗಳೇ ಕಾಣಿಸುತ್ತವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಹ ರಾಜ್ಯ ಸರ್ಕಾರವು ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದೆ, ಎಲ್ಲವನ್ನೂ ಕಂಡರೂ ಕಾಣದಂತೆ ಕುಳಿತಿದೆ. ಈ ಸರ್ಕಾರದ ವರ್ತನೆಯನ್ನು ಗಮನಿಸಿದರೆ, ಇದಕ್ಕೆ ಕಣ್ಣು, ಕಿವಿ ಮತ್ತು ಹೃದಯ ಇಲ್ಲದಂತಾಗಿದೆ ಎಂದು ಟೀಕಿಸಿದರು.
Karnataka Government ಸಿಎಂ ಬೆಂಬಲಿಗರಿಂದ ಡಿಸಿಎಂ ಬಣಕ್ಕೆ ಬೆದರಿಕೆ? ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ
ಸಚಿವ ಸಂಪುಟ ವಿಸ್ತರಣೆಯ ಕುರಿತು ಮಾತನಾಡಿದ ಈಶ್ವರಪ್ಪ ಅವರು, ಆಡಳಿತ ಪಕ್ಷದೊಳಗಿನ ಗೊಂದಲಗಳ ಬಗ್ಗೆ ಪ್ರಸ್ತಾಪಿಸಿದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು ಎಂದು ಅವರ ಬೆಂಬಲಿಗರು ಪದೇ ಪದೇ ಹೇಳುತ್ತಿದ್ದಾರೆ. ಇತ್ತ, ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸಿದ್ದರಾಮಯ್ಯನವರ ಪುತ್ರರಾದ ಯತೀಂದ್ರ ಸಿದ್ಧರಾಮಯ್ಯ ಅವರು ಹೇಳುತ್ತಾರೆ. ಆದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು ಹೇಳುತ್ತಲೇ ಇದ್ದಾರೆ. ಈ ಎಲ್ಲಾ ಗೊಂದಲಗಳ ನಡುವೆಯೂ ಹೈಕಮಾಂಡ್ ಮಾತ್ರ ಈ ಬಗ್ಗೆ ಒಮ್ಮೆಯೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದರು.
ಸಿದ್ದರಾಮಯ್ಯನವರ ಆಪ್ತರಾದ ಸಲೀಂ ಅಹ್ಮದ್ ಮತ್ತು ಜಮೀರ್ ಅಹ್ಮದ್ ಅವರು ಪದೇ ಪದೇ ಸಚಿವ ಸಂಪುಟ ವಿಸ್ತರಣೆಯ ಕುರಿತು ಹೇಳಿಕೆ ನೀಡುತ್ತಿರುವುದರಿಂದ, ಡಿಕೆ ಶಿವಕುಮಾರ್ ಬಣದಲ್ಲಿರುವ ಸಚಿವರು ತಮ್ಮ ಸ್ಥಾನ ಎಲ್ಲಿ ಬದಲಾವಣೆ ಆಗುತ್ತದೆಯೋ ಎಂಬ ಭಯದಲ್ಲಿ ಇದ್ದಾರೆ ಎಂದರು. ಈ ಎಲ್ಲಾ ಆಂತರಿಕ ಕಲಹಗಳನ್ನು ಗಮನಿಸಿದರೆ, ಈ ಸರ್ಕಾರ ಉಳಿಯುವುದೇ ಕಷ್ಟ. ಈ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುತ್ತದೆಯೇ ಅಥವಾ ರಾಷ್ಟ್ರಪತಿ ಆಳ್ವಿಕೆ ಬರುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ನುಡಿದರು.
ಸಿದ್ದರಾಮಯ್ಯನವರ ಎದೆ ಬಗೆದರೆ ರಾಹುಲ್ ಮತ್ತು ಸೋನಿಯಾ ಗಾಂಧಿಯವರು ಕಾಣುತ್ತಾರೆ
ಇತ್ತೀಚೆಗೆ ಮಠಾಧೀಶರೊಬ್ಬರು ಸಿಎಂ ಸಿದ್ದರಾಮಯ್ಯನವರ ಎದೆ ಬಗೆದರೆ ಬಸವಣ್ಣ ಕಾಣುತ್ತಾರೆ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಕೆಲವು ಮಠಾಧೀಶರು ಮುಖ್ಯಮಂತ್ರಿಗಳ ಬಾಲಂಗೋಚಿಗಳಾಗಿದ್ದಾರೆ ಎಂದು ಆರೋಪಿಸಿದರು.ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಹಿಂದೂ ಎಂದು ಬರೆಸಿರಿ ಎನ್ನುತ್ತಾರೆ. ಆದರೆ ಬೆಂಗಳೂರಿನ ಮತ್ತೊಂದು ಸಮಾವೇಶದಲ್ಲಿ ಲಿಂಗಾಯತ ಎಂದು ಬರೆಸಿರಿ ಎನ್ನುತ್ತಾರೆ. ಇದನ್ನು ನೋಡಿದರೆ ಮಠಾಧೀಶರು ಅವಕಾಶವಾದಿಗಳಾಗಿದ್ದಾರೆ ಎಂದು ಅನಿಸುತ್ತದೆ ಎಂದು ಟೀಕಿಸಿದರು.
ಮಠಾಧೀಶರ ಹೇಳಿಕೆಯನ್ನು ತಳ್ಳಿಹಾಕಿದ ಈಶ್ವರಪ್ಪ ಅವರು, ಸಿದ್ದರಾಮಯ್ಯನವರ ಎದೆ ಬಗೆದರೆ ಬಸವಣ್ಣನವರ ಬದಲು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಣಿಸುತ್ತಾರೆ ಎಂದು ವ್ಯಂಗ್ಯವಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸಿಎಂ ಅವರು ಅವರಿಬ್ಬರನ್ನು ತಮ್ಮ ಎದೆಯಲ್ಲಿ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಹೃದಯದಲ್ಲಿ ಒಂದು ಕಡೆ ರಾಹುಲ್ ಗಾಂಧಿಯವರನ್ನು ಮತ್ತು ಇನ್ನೊಂದೆಡೆ ಸೋನಿಯಾ ಗಾಂಧಿಯವರನ್ನು ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.
Karnataka Government


