Gutka Ban ಶಿವಮೊಗ್ಗ: ಗುಟ್ಕಾ ಹಾಗೂ ಪಾನ್ ಮಸಾಲಾಗಳನ್ನು ಏಕಾಏಕಿ ಒಂದು ವರ್ಷದ ಅವಧಿಗೆ ನಿಷೇಧಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಿ ನೀತಿಯ ವಿರುದ್ಧ ಹರಿದಾಯ್ದ ಅವರು, ಈ ನಿರ್ಧಾರದಿಂದ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದರು.
ತೀರ್ಥಳ್ಳಿ : ಅಡ್ಕೆ ಮರದ್ ಬುಡಕ್ಕೆ ಗರ್ನಲ್ ಇಟ್ಟು ಸರ್ಕಾರ ಹಿಂಗ್ ಮಾಡೋದು ಸರಿಯೆನ್ರಿ
ನಾನು ಆರೋಗ್ಯಕ್ಕೆ ಹಾನಿಕರವಾದ ಉತ್ಪನ್ನಗಳ ಪರವಾಗಿ ಬೆಂಬಲವಾಗಿ ನಿಲ್ಲುತ್ತಿಲ್ಲ. ಆದರೆ, ಲಕ್ಷಾಂತರ ರೈತರ ಜೀವನೋಪಾಯವಾಗಿರುವ ಅಡಿಕೆ ಬೆಳೆಯ ಹಿತರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ. ದೇಶದಲ್ಲಿ ಒಟ್ಟು 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಅದರಲ್ಲಿ ರಾಜ್ಯದಲ್ಲೇ 5 ಲಕ್ಷ ಹೆಕ್ಟೇರ್ ಹಾಗೂ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 2.5 ಲಕ್ಷ ಹೆಕ್ಟೇರ್ ವಿಸ್ತೀರ್ಣವಿದೆ. ಈಗಾಗಲೇ ಹಲವು ರೋಗಬಾಧೆಗಳಿಂದ ಇಳುವರಿ ಕುಸಿದು ರೈತರು ಕಣ್ಣೀರಿಡುತ್ತಿದ್ದರೆ, ಮತ್ತೊಂದೆಡೆ ವಿದೇಶಗಳಿಂದ ಅಕ್ರಮವಾಗಿ ಅಡಿಕೆ ಆಮದಾಗುತ್ತಿದ್ದು, ಬೆಳೆಗಾರರು ಆತಂಕದಲ್ಲಿದ್ದಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಸರ್ಕಾರದ ಈ ನಿರ್ಧಾರ ಬೆಳೆಗಾರರ ಹೊಟ್ಟೆಗೆ ಹೊಡೆಯುವ ಕೆಲಸವಾಗಿದೆ, ಎಂದು ಆರೋಪಿಸಿದರು.
ಹಿಂದೆ ಗುಲಾಂ ನಬಿ ಆಜಾದ್ ಕೇಂದ್ರ ಆರೋಗ್ಯ ಸಚಿವರಾಗಿದ್ದ ಕಾಲದಲ್ಲೂ ಕಾಂಗ್ರೆಸ್ ಸರ್ಕಾರ ಅಡಿಕೆ ವಿರುದ್ಧ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ರಾಜ್ಯ ಸರ್ಕಾರಕ್ಕೆ ಬ್ಲಾಂಕೆಟ್ ಬ್ಯಾನ್ ಮಾಡುವ ಅಧಿಕಾರವಿಲ್ಲದಿದ್ದರೂ, ಸ್ಲೀಪಿಂಗ್ ಬ್ಯಾನ್ ನೆಪದಲ್ಲಿ ಒಂದು ವರ್ಷ ನಿಷೇಧ ಹೇರಿದೆ. ಸಿಗರೆಟ್ ಕಂಪನಿಗಳ ಪ್ರಭಾವಿ ಲಾಬಿಗೆ ಮಣಿದು ಸರ್ಕಾರ ಈ ನಿರ್ಧಾರ ತಳೆದಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಿಎಲ್-7 ಬಾರ್ ಲೈಸೆನ್ಸ್ ನೀಡುವ ಮೂಲಕ ಅಡ್ಡದಾರಿಯಲ್ಲಿ ಆದಾಯ ಗಳಿಸುವ ಸರ್ಕಾರ, ಸಿಎಂ ನೀಡಿದ ಒಂದೇ ಒಂದು ಹೇಳಿಕೆಯಿಂದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ 4,000 ದಿಂದ 5,000 ದಷ್ಟು ದಿಢೀರ್ ಕುಸಿತ ಕಾಣುವಂತೆ ಮಾಡಿದೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡಿಕೆ ವಲಯದಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 500 ಕೋಟಿ ತೆರಿಗೆ ಆದಾಯ ಹರಿದುಬರುತ್ತದೆ. ದುರಾಸೆಯಿಂದ ಕೆಲವರು ಮಾಡಿದ ತಪ್ಪಿನಿಂದ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿದ್ದರೆ, ಅದಕ್ಕೆ ಸೂಕ್ತ ತಪಾಸಣೆ ನಡೆಸಬೇಕೇ ಹೊರತು ಸಮಗ್ರ ರಂಗಕ್ಕೆ ಪೆಟ್ಟು ನೀಡಬಾರದು. ಕೂಡಲೇ ಸರ್ಕಾರ ಈ ನಿಷೇಧದ ಆದೇಶವನ್ನು ಹಿಂಪಡೆಯದಿದ್ದರೆ ಬೃಹತ್ ಮಟ್ಟದ ಹೋರಾಟ ರೂಪಿಸಲಾಗುವುದು. ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ತರಲು ಲೋಕಸಭೆ ಮಟ್ಟದಲ್ಲೂ ಪ್ರಯತ್ನಿಸಲಾಗುವುದು, ಎಂದರು. ಇದೇ ವೇಳೆ ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಗೃಹ ಸಚಿವರು ಸದನದಲ್ಲಿದ್ದರೂ ವಿಪಕ್ಷಗಳು ಅನಗತ್ಯ ಆರೋಪ ಮಾಡಿ ಕಲಾಪ ನಡೆಯದಂತೆ ಕಾಲಹರಣ ಮಾಡಿವೆ ಎಂದು ದೂರಿದರು.
