ಶಿವಮೊಗ್ಗ : ಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ತವರಿಗೆ ಮರಳಿದ ಇಬ್ಬರು ಯೋಧರಿಗೆ ಅದ್ದೂರಿ ಸ್ವಾಗತ

ಹಂಚಿಕೊಳ್ಳಿ
WhatsApp Facebook X Telegram
ಇಬ್ಬರು ಯೋಧರಿಗೆ ಅದ್ದೂರಿ ಸ್ವಾಗತ
ಇಬ್ಬರು ಯೋಧರಿಗೆ ಅದ್ದೂರಿ ಸ್ವಾಗತ

ಮಲೆನಾಡು ಟಯಡೆ ಸುದ್ದಿ/ ಶಿವಮೊಗ್ಗ : ಶಿವಮೊಗ್ಗ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದ ಇಬ್ಬರು ಯೋಧರಿಗೆ ಕುಟುಂಬದವರು, ಸ್ನೇಹಿತರು, ಮಾಜಿ ಯೋಧರು ಅದ್ಧೂರಿ ಸ್ವಾಗತ ನೀಡಿದರು.

ರೈಲ್ವೆ ನಿಲ್ದಾಣದಲ್ಲಿ ಇಂದು ರಾತ್ರಿ ಬೆಂಗಳೂರು – ತಾಳಗುಪ್ಪ ರೈಲಿನಲ್ಲಿ ಇಬ್ಬರು ಯೋಧರು ತವರಿಗೆ ಮರಳಿದರು. ಯೋಧರು ರೈಲಿನಿಂದ ಇಳಿಯುತ್ತಿದ್ದಂತೆ ಕುಟುಂಬದವರು, ಸ್ನೇಹಿತರು ಘೋಷಣೆ ಕೂಗಿದರು. ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತಿಸಿದರು. 

ರೈಲ್ವೇ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಯೋಧರು ಭಾರತೀಯ ಸೇನೆಯಲ್ಲಿ ಸಲ್ಲಿಸಿದ ಸೇವೆಯ ಕುರಿತು ಮಾಹಿತಿ ನೀಡಿದರು.

ಹವಲ್ದಾರ್​ ವಿಜಯ್​ ಕುಮಾರ್​ ಮಾತನಾಡಿ ನಾನು ಸೇನೆಗೆ ಆಯ್ಕೆಯಾದ ನಂತರ ಭೂಪಾಲ್‌ನಲ್ಲಿ ತರಬೇತಿ ಪೂರ್ಣಗೊಳಿಸಿದೆ. ನಂತರ ಪಂಜಾಬ್‌, ಅಸ್ಸಾಂನ ಗುವಾಹಟಿ, ಉತ್ತರ ಪ್ರದೇಶದ ಬಬೀನಾ, ಜಮ್ಮುವಿನ ಮೆಂಧರ್ ಸೆಕ್ಟರ್‌ ಹಾಗೂ ದೆಹಲಿಯಲ್ಲಿ ಸೇವೆ ಸಲ್ಲಿಸಿದೆ. ನಂತರ ಅರುಣಾಚಲ ಪ್ರದೇಶ, ಜಾನ್ಸಿ ಹಾಗೂ ಜಮ್ಮುವಿನ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಒಟ್ಟು 24 ವರ್ಷಗಳ ಸೇವೆ ಪೂರ್ಣಗೊಳಿಸಿ ತವರಿನತ್ತ ಹಿಂತಿರುಗಿದ್ದೇನೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಜಮ್ಮುವಿನ ಕಥುವಾ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದು, ಅಲ್ಲಿ ಡ್ರೋಣ್‌ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆ. ಪ್ರಸ್ತುತ ಹವಾಲ್ದಾರ್ ಹುದ್ದೆಯಿಂದ ಸೇವಾ ನಿವೃತ್ತಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.

12.09.2002ರಂದು ಮಂಗಳೂರು BRO, ಶಿವಮೊಗ್ಗದಲ್ಲಿ ನಡೆಸಿದ ರ್ಯಾಲಿಯಲ್ಲಿ ಭಾರತೀಯ ಸೇನೆಗೆ ಆಯ್ಕೆಯಾದ ವಿಜಯ್ ಕುಮಾರ್ ಜೆ. ಮಧ್ಯಪ್ರದೇಶದ ಭೋಪಾಲ್‌ಗೆ ತೆರಳಿ ಸೇನಾ ತರಬೇತಿ ಪೂರ್ಣಗೊಳಿಸಿದರು. ನಂತರ ಮೊದಲ ಪೋಸ್ಟಿಂಗ್ ಭಟಿಂಡಾ, ಪಂಜಾಬ್ (2½ ವರ್ಷ). ಅಲ್ಲಿಂದ ಗುವಾಹಟಿ, ಅಸ್ಸಾಂ (3 ವರ್ಷ), ಬಬೀನಾ, ಉತ್ತರ ಪ್ರದೇಶ (3 ವರ್ಷ), ಮೆಂಧರ್ ಸೆಕ್ಟರ್, ಜಮ್ಮು ಮತ್ತು ಕಾಶ್ಮೀರ (3 ವರ್ಷ), ದೆಹಲಿ ಕ್ಯಾಂಟ್ (3 ವರ್ಷ), ಟೆಂಗಾ, ಅರುಣಾಚಲ ಪ್ರದೇಶ (2 ವರ್ಷ), ಝಾನ್ಸಿ, ಉತ್ತರ ಪ್ರದೇಶ (3 ವರ್ಷ), ಕತುವಾ, ಜಮ್ಮು ಮತ್ತು ಕಾಶ್ಮೀರ (2½ ವರ್ಷ) ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದರು. ಸದ್ಯ ಸಿಕಂದರಾಬಾದ್‌ನಲ್ಲಿ ತಮ್ಮ ಸೇನಾ ಸೇವೆಯ ಕೊನೆಯ ದಿನಗಳನ್ನು ಪೂರ್ಣಗೊಳಿಸಿ ನಿವೃತ್ತರಾಗಿ ತವರಿನತ್ತ ಹೊರಟಿದ್ದಾರೆ. ಸಿಪಾಯಿಯಾಗಿ ಸೇನಾ ಬದುಕು ಆರಂಭಿಸಿದ ವಿಜಯ್ ಕುಮಾರ್, ಲ್ಯಾನ್ಸ್ ನಾಯಕ್, ನಾಯಕ್, ಹವಾಲ್ದಾರ್ ಹುದ್ದೆಗಳನ್ನು ಅಲಂಕರಿಸಿ, ಸದ್ಯ ಹವಾಲ್ದಾರ್ (ACP ನಾಯಬ್ ಸುಬೇದಾರ್) ಆಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಪ್ರತಿಯೊಬ್ಬ ಯೋಧನ ಬದುಕಿನ ಹಿಂದೆಯೂ ಇರುವಂತೆ ಇವರ ಬದುಕಿನಲ್ಲಿ ನಮಗೆ ತಿಳಿಯದ ತ್ಯಾಗ, ಅಪಾಯ, ಹೋರಾಟ ಮತ್ತು ದೇಶಕ್ಕಾಗಿ ಅನೇಕ ವರ್ಷಗಳ ಕಥೆಗಳಿವೆ. ಅದಕ್ಕಾಗಿ ಹಲವು ಮೆಡಲ್‌ಗಳು ಸಹ ಎದೆಯನ್ನು ಅಲಂಕರಿಸಿವೆ.ಸರ್ಜಿಕಲ್ ಸ್ಟ್ರೈಕ್ ನಡೆದ ಸಂದರ್ಭದಲ್ಲಿ ವಿಜಯ್ ಕುಮಾರ್ ದೆಹಲಿ ಕ್ಯಾಂಟ್‌ನಲ್ಲಿ ರಕ್ಷಣಾ ಡ್ಯೂಟಿಯಲ್ಲಿದ್ದರು. ಬಾಲಾಕೋಟ್ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ಟೆಂಗಾದಲ್ಲಿ ರಕ್ಷಣಾ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೇ ವೇಳೆ ಮೊತ್ತೊಬ್ಬರ ಯೋಧರಾದ ಶಿವಾಜಿನಾಯ್ಕ್ ಮಾತನಾಡಿ ನನ್ನದು ಮೂಲತಃ ನ್ಯಾಮತಿ ತಾಲೂಕು. ಶಿವಮೊಗ್ಗದಲ್ಲಿ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದೆ. 2002ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಸೇನಾ ನೇಮಕಾತಿ ವೇಳೆ ನೇಮಕವಾಗಿ ಮಂಗಳೂರಿನಲ್ಲಿ ಆಯ್ಕೆಯಾಗಿ, ಸಿಕಂದರಾಬಾದ್‌ನಲ್ಲಿ ಎರಡು ವರ್ಷ ತರಬೇತಿ ಪಡೆದೆ. ನಂತರ ಪಂಜಾಬ್‌, ಜಮ್ಮು-ಕಾಶ್ಮೀರದಲ್ಲಿ ಆರ್‌ಆರ್ (ರಾಷ್ಟ್ರೀಯ ರೈಫಲ್ಸ್) ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡೆ. ಬಳಿಕ ಬಾಂಬೆ, ರಾಜಸ್ಥಾನದಲ್ಲಿ ರಷ್ಯನ್ ಸಮರಾಭ್ಯಾಸ, ಉತ್ತರ ಪ್ರದೇಶ, ಪಠಾಣ್‌ಕೋಟ್ ಹಾಗೂ ವಿವಿಧ ಗಡಿ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದೆ. ಕೊನೆಯದಾಗಿ ಗುವಾಹಟಿ ಮತ್ತು ಅಸ್ಸಾಂ ಭಾಗದಲ್ಲಿ ಸೇವೆ ಸಲ್ಲಿಸಿ, ನಾನ್-ಕಮಿಷನ್ಡ್ ಆಫೀಸರ್ ಆಗಿ 24 ವರ್ಷಗಳ ಸೇವೆ ಪೂರ್ಣಗೊಳಿಸಿ ಹಿಂತಿರುಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್‌ ಸಿ.ಜಿ, ಮಾತನಾಡಿ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ಇಬ್ಬರು ಯೋಧರು ತವರಿಗೆ ಮರಳಿದ್ದಾರೆ. ಯೋಧರು ನಮ್ಮ ಹೆಮ್ಮೆ. ಇವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ.ಮಧುಸೂದನ್‌, ರಾಷ್ಟ್ರಭಕ್ತರ ಬಳಗದ ಕಾಂತೇಶ್‌ ಈಶ್ವರಪ್ಪ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಶಿವಕುಮಾರ್‌.ಡಿ.ಎಸ್‌, ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಕಾರ್ಯದರ್ಶಿ ನಾಗರಾಜ್‌ ನೇರಿಗೆ, ಹಿರಿಯ ಪತ್ರಕರ್ತರಾದ ಜೇಸುದಾಸ್‌, ಗಣೇಶ್‌ ನಾವುಡ, ಗಂಗಾಧರ್‌.ಎ, ಶಿವಮೊಗ್ಗ ನಾಗರಾಜ್‌, ರಘು, ನವೀನ್‌ ಪುರದಾಳ್‌, ಸಾವಂತ್‌, ಕೊಟ್ರೇಶ್‌ ಸೇರಿ ಹಲವರು ಇದ್ದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor