ನಕಲಿ ಚಿನ್ನದ ಕೇಸ್​ನಲ್ಲಿ ಟ್ವಿಸ್ಟ್! ತೀರ್ಥಹಳ್ಳಿ ರಾಹುಲ್ ಅರೆಸ್ಟ್! ಮಾಸ್ಟರ್​ ಮೈಂಡ್ ಮಾತ್ರ ಬಾಕಿ!

ಹಂಚಿಕೊಳ್ಳಿ
WhatsApp Facebook X Telegram
Fake Gold Loan Racket Busted in Shivamogga
Fake Gold Loan Racket Busted in Shivamogga

Fake Gold Loan Racket / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಕಲಿ ಚಿನ್ನ ಅಡವಿಟ್ಟು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಲೋನ್ ಪಡೆದು ಮೋಸ ಮಾಡುತ್ತಿದ್ದ ಅಡಮಾನ ಪ್ರಕರಣದಲ್ಲಿ ಇದೀಗ ಪೊಲೀಸರು ಕಿಂಗ್​ಪಿನ್​ನನ್ನು ಅರೆಸ್ಟ್ ಮಾಡಿದ್ದಾರೆ.

ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ತಮ್ಮಲ್ಲಿ ದಾಖಲಾದ ಪ್ರಕರಣ ಸಂಬಂಧ ಸರಣಿ ರೇಡ್​ಗಳನ್ನು ನಡೆಸಿದ್ದಾರೆ. ಅಲ್ಲದೆ ವಿಸ್ತೃತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಲೋಕೇಶ್‌ನನ್ನು ಬಂಧಿಸಿದ್ದ ಪೊಲೀಸರು ಇದೀಗ ಇಡೀ ಪ್ರಕರಣದ ವಂಚನೆಯ ರೂವಾರಿ ಎನ್ನಲಾದ ರಾಹುಲ್‌ನನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತೀರ್ಥಹಳ್ಳಿ ತಾಲೂಕಿನ ಬಗ್ಗೋಡಿ ಗ್ರಾಮದ ನಿವಾಸಿಗಳಾದ ರಾಹುಲ್ ಹಾಗೂ ಆತನ ಸಹೋದರ ಲೋಕೇಶ್, ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಿಂದ ಸಾಲ ಪಡೆಯಲು ನಕಲಿ ಚಿನ್ನದ ಆಭರಣಗಳನ್ನ ಬಳಸ್ತಿದ್ದರು. 10 ರಿಂದ 30 ಪರ್ಸೆಂಟ್ ಗೋಲ್ಡ್ ಇರುತ್ತಿದ್ದ ಚಿನ್ನದ ಮೇಲ್ಮೇಲೆ ಅಸಲಿಯಾಗಿಯೇ ಕಾಣುತ್ತಿತ್ತು. ಹಾಗಾಗಿ ಆರೋಪಿಗಳಿಗೆ ವಂಚನೆ ಸುಲಭ ಸಾಧ್ಯವಾಗಿತ್ತು ಎನ್ನುತ್ತಾರೆ ಪೊಲೀಸರು

ಚಿನ್ನದ ಅಡಮಾನದ ಸಮಯದಲ್ಲಿ ಗೋಲ್ಡ್​ನ ಮೌಲ್ಯಮಾಪಕರಿಗೆ ಯಾವುದೇ ಅನುಮಾನ ಬರದಂತೆ ಮಾಡಲು, ಆಭರಣಗಳ ಮೇಲೆ ನಕಲಿ ಬಿಐಎಸ್ ಹಾಲ್‌ಮಾರ್ಕ್ ಸೀಲ್​ ಹಾಕುತ್ತಿದ್ದರು.

ಇದರಿಂದಾಗಿ ಬ್ಯಾಂಕ್​ಗಳಲ್ಲಿ ಆರೋಪಿಗಳು ಆರಾಮಾಗಿ ಲೋನ್​ ಮಾಡಲು ಸಾಧ್ಯವಾಗುತ್ತಿತ್ತು. ಇನ್ನೂ ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಗೋಪಾಲ್ ಹಾಗೂ ವಿದ್ಯಾನಗರದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಗಳು, ಆಲ್ಕೊಳದ ಸಿರಿ ಸೌಹಾರ್ದ ಸೊಸೈಟಿ, ಸರಸ್ವತಿ ಕೋ-ಆಪರೇಟಿವ್ ಸೊಸೈಟಿ ಹಾಗೂ ಅನ್ನಪೂರ್ಣೇಶ್ವರಿ ಜ್ಯುವೆಲ್ಲರಿ ಸೇರಿದಂತೆ ಶಿವಮೊಗ್ಗದಾದ್ಯಂತ ಹಲವು ಹಣಕಾಸು ಸಂಸ್ಥೆಗಳಲ್ಲಿ ಆರೋಪಿಗಳು ನಕಲಿ ಆಭರಣಗಳನ್ನು ಅಡವಿಟ್ಟಿದ್ದರು ಎನ್ನಲಾಗುತ್ತಿದ್ದು, ಈ ಕುರಿತು ತನಿಖೆ ಮುಂದುವರಿದಿದೆ.

ಇದವರೆಗೂ ಸುಮಾರು 700 ಗ್ರಾಂ ನಕಲಿ ಚಿನ್ನದ ಆಭರಣಗಳನ್ನ ಅಡವಿಟ್ಟು , 40 ಲಕ್ಷದಿಂದ 50 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಇತ್ತ ತನಿಖೆ ಮುಂದುವರಿದಿರುವಂತೆಯೇ ಪ್ರಕರಣದಲ್ಲಿ ಅಂತಾರಾಜ್ಯ ಜಾಲವೊಂದು ಕಾರ್ಯನಿರ್ವಹಿಸುತ್ತಿರುವುದು ಪೊಲೀಸರಿಗೆ ಗೊತ್ತಾಗಿದೆ. ಅನುಮಾನಕ್ಕೆ ಪೂರಕವಾಗಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಮೂಲದ ಶರತ್ ಎಂಬಾತ ಪಂಜಾಬ್‌ನ ಅಮೃತಸರದಿಂದ ನಕಲಿ ಚಿನ್ನದ ಆಭರಣಗಳನ್ನು ವಿಮಾನದ ಮೂಲಕ ರಾಜ್ಯಕ್ಕೆ ತರಿಸಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೊಲೀಸರು ಇದುವರೆಗೆ ಲೋಕೇಶ್ ಹಾಗೂ ರಾಹುಲ್‌ನನ್ನು ಬಂಧಿಸಿದ್ದು, ಪರಾರಿಯಾಗಿರುವ ಆರೋಪಿ ಶರತ್ ಹಾಗೂ ಈ ಜಾಲದಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor