CM S. Bangarappa ಅಂದು ಕ್ರಿಸ್ ಮಸ್ ಹಬ್ಬದ ಸಂಭ್ರಮ ಮುಗಿಯುವ ಹಂತದಲ್ಲಿತ್ತು. ಆದೇ ಸಂದರ್ಭದಲ್ಲಿ ಮದ್ಯರಾತ್ರಿಗೆ ಬಂದ ಆ ಸಂದೇಶ ರಾಜ್ಯದ ಜನತೆಗೆ ಗರಬಡಿದಂತೆ ಮಾಡಿತ್ತು. ಹೌದು 26-12-2011 ರ ಸುಮಾರು 1 ಗಂಟೆ ಮುಂಜಾನೆ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದ ಸಂದೇಶ ಕಾಡ್ಗಿಚ್ಚಿನಂತೆ ಹರಡಿತ್ತು. ದೃಷ್ಯ ಮಾದ್ಯಮಗಳು ಮದ್ಯರಾತ್ರಿಯಿಂದಲೇ ಸುದ್ದಿ ಬಿತ್ತರಿಸಲು ಅಣಿಯಾದವು. ಪಕ್ಷಾತೀತವಾಗಿ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಬೆಂಗಳೂರಿನಲ್ಲಿ ಸಾರ್ವಜನಿಕ ಅಂತಿಮದರ್ಶನ ಮುಗಿದ ನಂತರ ಎಸ್ ಬಂಗಾರಪ್ಪನವರ ಪಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ ಕರೆತರುವಾಗ ಬಂಗಾರಪ್ಪ ಅಭಿಮಾನಿಗಳು ರಸ್ತೆ ಮಾರ್ಗದ ಪ್ರತಿ ಹಳ್ಳಿ ಹೋಬಳಿ ತಾಲೂಕುಗಳಲ್ಲಿ ಹಾರ ತುರಾಯಿ ಹಾಕಿ ಜೈಘೋಷ ಕೂಗಿದರು.

ವರ್ಣರಂಜಿತ ರಾಜಕಾರಣಿ,ಹೋರಾಟಗಾರ ಸಾರೆಕೊಪ್ಪ ಬಂಗಾರಪ್ಪರ ನಿಧನ ಶಿವಮೊಗ್ಗ ಜಿಲ್ಲೆಯ ಜನತೆಯನ್ನು ಅಕ್ಷರ ಸಹ ಶೋಕಸಾಗರದಲ್ಲಿ ಮುಳುಗಿಸಿತ್ತು. ಬಂಗಾರಪ್ಪರ ಪಾರ್ಥೀವ ಶರೀರ ಹೊತ್ತ ವಾಹನ ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಅಂತಿಮ ದರ್ಶನ ಪಡೆಯಲು ಜನರು ಕಾತುರರಾಗಿದ್ದರು.ಬಂಗಾರಪ್ಪರ ಪಾರ್ಥಿವ ಶರೀರ ಹೊತ್ತ ವಾಹನ ಶಿವಮೊಗ್ಗ ನಗರವನ್ನು ಪ್ರವೇಶಿಸುತ್ತಿದ್ದಂತೆ ಅಭಿಮಾನಿ ದೇವರುಗಳು ಪಟಾಕಿ ಸಿಡಿಸಿದರು. ಬಂಗಾರಪ್ಪ ಪರ ಜೈಘೋಷಗಳು ಮುಗಿಲುಮುಟ್ಟಿದವು. ಬಂಗಾರಪ್ಪರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ನಗರದ ಸೈನ್ಸ್ ಮೈದಾನದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು.ಬಂಗಾರಪ್ಪರ ಅಂತಿಮ ಕಾರ್ಯದ ಉಸ್ತುವಾರಿಯನ್ನು ಖುದ್ದು ಅಂದಿನ ಡಿಸಿ ಪೊನ್ನುರಾಜ್ ಹಾಗು ಎಸ್ಪಿ ರಮಣಗುಪ್ತಾ ವಹಿಸಿಕೊಂಡಿದ್ದರು. ಸೈನ್ಸ್ ಮೈದಾನದ ವೇದಿಕೆ ಭದ್ರತೆಗಾಗಿ ಇಬ್ಬರು ಡಿಎಸ್ಪಿ,6 ಮಂದಿ ಸರ್ಕಲ್ ಇನ್ಸ್ ಪೆಕ್ಟರ್ 12 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಸುಮಾರು 100 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಅಂದು ಬಂಗಾರಪ್ಪರ ಮೃತದೇಹವನ್ನು ನೋಡಲು ಜನರು ಸಂಜೆಯಿಂದಲೇ ಮೈದಾನದಲ್ಲಿ ಕಾದು ಕುಳಿತಿದ್ದರು. ರಾತ್ರಿ 9 ಗಂಟೆ ಹೊತ್ತಿಗೆ ಭದ್ರಾವತಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿ ಗೌಡ ಮತ್ತಿತರ ಮುಖಂಡರು ಅಂತಿಮ ನಮನ ಸಲ್ಲಿಸಿದರು.
CM S. Bangarappa ಅಂತಿಮ ಯಾತ್ರೆಯಲ್ಲಿ ಮಂಚೂಣಿಯಲ್ಲಿದ್ದ ಎಂ ಶ್ರೀಕಾಂತ್
ಭದ್ರಾವತಿಯಿಂದ ಶಿವಮೊಗ್ಗದವರೆಗೂ ಅಲ್ಲಲ್ಲಿ ಅಭಿಮಾನಿಗಳು ವಾಹನವನ್ನು ನಿಲ್ಲಿಸಿ ಅಂತಿಮ ದರ್ಶನ ಪಡೆದರು.ಶಿವಮೊಗ್ಗದ ಸೈನ್ಸ್ ಮೈದಾನದ ವೇದಿಕೆಯತ್ತ ಬಂಗಾರಪ್ಪರ ಪಾರ್ಧಿವ ಶರೀರ ಬರುವ ಹೊತ್ತಿಗೆ ರಾತ್ರಿ 11 ಗಂಟೆಯಾಗಿತ್ತು. ಬೆಂಗಳೂರಿನಿಂದ ಶಿವಮೊಗ್ಗ ಹಾಗು ಕುಬಟೂರಿನಲ್ಲಿ ಅಂತಿಮ ಕಾರ್ಯದವರೆಗೂ ಅಂದು ಜೆಡಿಎಸ್ ನಲ್ಲಿದ್ದ ಎಂ ಶ್ರೀಕಾಂತ್ ಮಂಚೂಣಿಯಲ್ಲಿದ್ದು ಕಾರ್ಯ ಮುಗಿಸಿದ್ದು ವಿಶೇಷವಾಗಿತ್ತು. ಸೈನ್ಸ್ ಮೈದಾನದಲ್ಲಿ ಬಂಗಾರಪ್ಪರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟ ಸಂದರ್ಭದಲ್ಲಿ ವೇದಿಕೆಯತ್ತ ಬಂಗಾರಪ್ಪರ ಪಾರ್ಥಿವ ಶರೀರವನ್ನು ತರುತ್ತಿದ್ದಂತೆ ಜನಸಾಗರದ ನೂಕುನುಗ್ಗಲು ಉಂಟಾಯಿತು.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು.ಎಂ.ಶ್ರೀಕಾಂತ್ ರವರೇ ಖುದ್ದು ಜನರಲ್ಲಿ ಶಾಂತಿಯುತವಾಗಿ ದರ್ಶನ ಪಡೆಯುವಂತೆ ಮನವಿ ಮಾಡಿದರು. ನಂತರ ಪರಿಸ್ಥಿತಿ ಶಾಂತಗೊಳಿಸಿದ ಪೊಲೀಸರು ಎಲ್ಲರಿಗೂ ಬಂಗಾರಪ್ಪರ ಮೃತದೇಹದ ಅಂತಿಮ ದರ್ಶನ ಪಡೆಯಲು ಅನುಕೂಲ ಮಾಡಿಕೊಟ್ಟರು.

ಅಂದು ರೈತ ಮುಖಂಡ ಕಡಿದಾಳ್ ಶಾಮಣ್ಣ,ಕೆ.ಟಿ ಗಂಗಾಧರ್ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳು ಅಂತಿಮ ದರ್ಶನ ಪಡೆದರು.ಬಂಗಾರಪ್ಪರ ಅಭಿಮಾನಿಗಳು ಘೋಷಣೆಗಳನ್ನು ಕೂಗುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.ಅಂತಿಮ ದರ್ಶನ ಪಡೆದ ಅಭಿಮಾನಿಗಳು ಬಂಗಾರಪ್ಪರ ಒಡನಾಡಿಗಳು ನೆಚ್ಚಿನ ನಾಯಕನ ಗುಣಗಾನ ಮಾಡಿದರು.ಬಂಗಾರಪ್ಪರ ಪುತ್ರ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ತಂದೆಯವರ ಆದರ್ಶವನ್ನು ಮೆಲಕು ಹಾಕಿದರು.
ಸುಮಾರು ಎರಡು ಗಂಟೆಗಳ ಕಾಲ ಸಾರ್ವಜನಿಕರ ದರ್ಶನಕ್ಕಾಗಿ ಬಂಗಾರಪ್ಪರ ಮೃತದೇಹವನ್ನು ಸೈನ್ಸ್ ಮೈದಾನದಲ್ಲಿ ಇಡಲಾಗಿತ್ತು.ನಂತರ ಪಾರ್ಥಿವ ಶರೀರವನ್ನು ಕುಬಟೂರಿಗೆ ಕರೆದೊಯ್ಯಲಾಯಿತು.ಬಂಗಾರಪ್ಪರ ಪಾರ್ಥಿವ ಶರೀರವನ್ನು ಹೊತ್ತ ವಾಹನದ ಹಿಂದೆ ಜನರ ದಂಡೇ ಹರಿದು ಹೋಯಿತು. ನಂತರ ಶಿಕಾರಿಪುರ ಶಿರಾಳಕೊಪ್ಪ ಮಾರ್ಗವಾಗಿ ಪಾರ್ಥಿವ ಶರೀರವನ್ನು ಕುಬಟೂರು ಬಳಿಯಿರುವ ಲಕ್ಕವಳ್ಳಿಗೆ ಕರೆದೊಯ್ಯಲಾಯಿತು ಈ ಸಂದರ್ಭದಲ್ಲಿಯೂ ನಿರ್ವಹಣೆಯ ಜವಬ್ದಾರಿಯನ್ನು ಶ್ರೀಕಾಂತ್ ರವರೇ ಹೊತ್ತಿದ್ದರು.
CM S. Bangarappa ಬಂಗಾರಪ್ಪರ ತಂದೆ ತಾಯಿ ಸಮಾದಿಯಲ್ಲಿ ಪೂಜೆ
ಸಾರೆಕೊಪ್ಪ ಬಂಗಾರಪ್ಪ ತಂದೆತಾಯಿ ಆರಾಧಕ ಎಂಬುದು ಅವರ ಸಾವಿನ ನಂತರವೇ ಬಹುತೇಕ ಜನರಿಗೆ ಗೊತ್ತಾಗಿದ್ದು.ಜೀವಮಾನ ಕಾಲದಲ್ಲಿ ಹೆತ್ತವರು ಬೆವರನ್ನು ಬಸೆದು ಮಗನಿಗೆ ವಿದ್ಯಾಭ್ಯಾಸವನ್ನು ನೀಡಿದ ಅವರ ತ್ಯಾಗ ಮಮಕಾರಗಳು ಬಂಗಾರಪ್ಪರನ್ನು ಜೀವನದುದ್ದಕ್ಕೂ ಮರೆಯಲಾರದಂತೆ ಮಾಡಿದ್ದವು.ಹೀಗಾಗಿಯೇ ಬಂಗಾರಪ್ಪ ಕುಬಟೂರು ಬಳಿಯಿರುವ ಲಕ್ಕವಳ್ಳಿಯ ತೋಟದಲ್ಲಿ ತಂದೆತಾಯಿಗಾಗಿಯೇ ದೇಗುಲದಂತ ಸಮಾದಿಯನ್ನು ನಿರ್ಮಿಸಿದ್ದರು.ತಂದೆ ಲಕ್ಕಪ್ಪ ತಾಯಿ ಲಕ್ಕಮ್ಮನವರ ಸಮಾದಿಗಳನ್ನು ತೋಟದಲ್ಲಿ ಅಕ್ಕಪಕ್ಕದಲ್ಲಿಯೇ ನಿರ್ಮಿಸಿದ್ದಾರೆ.ಭವ್ಯ ದೇಗುಲದಂತಿರುವ ಈ ಸಮಾದಿಗಳನ್ನು ನೋಡಿದಾಗ ಬಂಗಾರಪ್ಪರು ಪೋಷಕರ ಮೇಲಿಟ್ಟಿದ್ದ ಪ್ರೀತಿ ವಾತ್ಯಲ್ಯಗಳೇನೆಂಬುದು ಅರ್ಥವಾಗುತ್ತದೆ.ಬಂಗಾರಪ್ಪ ಏಕಾಂತ ಬಯಸಿದಾಗಲೆಲ್ಲಾ ಹಾಗು ಸಂತಸ ದುಃಖವಾದಾಗಲೆಲ್ಲಾ ಈ ಸಮಾದಿ ಬಳಿ ಬಂದು ಪೋಷಕರನ್ನು ಪ್ರಾರ್ಥಿಸುತ್ತಿದ್ದರು. ಬಂಗಾರಪ್ಪ ತಿಂಗಳಿಗೆ ಒಮ್ಮೆಯಾದರೂ ಪೋಷಕರ ಸಮಾಧಿಗೆ ಬೇಟಿ ನೀಡಿ ಶ್ರವಣ ಕುಮಾರನಂತೆ ಪೂಜಿಸುತ್ತಿದ್ದರು.ತಂದೆತಾಯಿ ಎಂದರೆ ಬಂಗಾರಪ್ಪರಿಗೆ ಎಲ್ಲಿಲ್ಲದ ಪ್ರೀತಿ. ಬಂಗಾರಪ್ಪರ ಕೊನೆ ಆಸೆಯಂತೆ ಅವರ ಪಾರ್ಥೀವ ಶರೀರವನ್ನು ಅಂದು ಬೆಳಗಿನ ಜಾವ 4 ಗಂಟೆಗೆ ಲಕ್ಕವಳ್ಳಿಯ ತೋಟಕ್ಕೆ ಕರೆತರಲಾಯಿತು.ನಂತರ ಬಂಗಾರಪ್ಪ ಮಡದಿ ಶಕುಂತಲ,ಮಧು ಬಂಗಾರಪ್ಪ ಸೇರಿದಂತೆ ಕುಟುಂಬದ ಸದಸ್ಯರು ಸಮಾದಿಯ ಮುಂದೆ ಬಂಗಾರಪ್ಪರ ಪಾರ್ಥಿವ ಶರೀರವಿಟ್ಟು ಪೂಜಿಸಿದರು.ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಕಣ್ಣಾಲಿಗಳು ತುಂಬಿ ಬಂದಿದ್ದವು.ಬಂಗಾರಪ್ಪ ಬಯಸಿದ್ದೆಲ್ಲವನ್ನು ಜೀವಮಾನದಲ್ಲಿ ಪಡೆದರು.ಸಾವಿನ ನಂತರವೂ ಅವರ ಆಶಯವನ್ನು ಕುಟುಂಬಸ್ಥರು ಈಡೇರಿಸಿದ್ದು ಬಂಗಾರಪ್ಪರ ಮಾತೃ ಪ್ರೇಮವನ್ನು ನಾಡಿಗೆ ಸಾರಿ ಹೇಳಿತು. ನಂತರ ಬೆಳಗಿನ ಜಾವದ ಸಂದರ್ಭದಲ್ಲಿ ಮೃತದೇಹವನ್ನು ಕುಬಟೂರಿನ ಬಂಗಾರಪ್ಪರ ಸ್ವಗೃಹಕ್ಕೆ ತರಲಾಯಿತು. ಅಲ್ಲಿ ಬಂಗಾರಪ್ಪನವರ ನೆಚ್ಚಿನ ಹಾಡುಗಳನ್ನೇ ಅಹೋರಾತ್ರಿ ಭಜಿಸಲಾಯಿತು. ಪುತ್ರ ಕುಮಾರ್ ಬಂಗಾರಪ್ಪ ಹಾಗು ಪುತ್ರ ಸನಿಹದಲ್ಲಿಯೇ ಬಂಗಾರಪ್ಪರ ದರ್ಶನ ಪಡೆದರು. ಬೆಳಗಿನ ಜಾವ ಇಡೀ ಕುಬಟೂರಿನ ಗ್ರಾಮದಲ್ಲಿ ಸ್ಮಶಾನ ಮೌನ ಆವರಿತ್ತು. ಪತ್ರಕರ್ತರಿಗೆ ಬೆಳಿಗ್ಗೆ ತಿಂಡಿ ಸಿಗುವುದು ಕಷ್ಟವಾಗಿತ್ತು. ರಾತ್ರಿಯೆಲ್ಲಾ ನಿದ್ದೆಗೆಟ್ಟು ಸುದ್ದಿ ಮಾಡಿದ ದೃಷ್ಯ ಮಾಧ್ಯಮದ ಪತ್ರಕರ್ತರಿಗೆ ಎಂ ಶ್ರೀಕಾಂತ್ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿದರು.

CM S. Bangarappa ದಾಖಲೆ ಬರೆದ ಅಂತಿಮ ಯಾತ್ರೆ
ಬಹುಷಃ ರಾಜಕಾರಣಿಗಳ ಅಂತಿಮ ಯಾತ್ರೆಯಲ್ಲಿ ಬಂಗಾರಪ್ಪರಿಗೆ ಸಿಕ್ಕಷ್ಟು ಗೌರವ ನಮನ ಬೇರ್ಯಾರಿಗೂ ಸಿಗಲಿಲ್ಲವೇನೋ ಗೊತ್ತಿಲ್ಲ. ಬಂಗಾರಪ್ಪನವರ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನಗಳನ್ನು ಸೊರಬದ ಖಾಸಗಿ ಶಾಲೆ ಪಕ್ಕದಲ್ಲಿ ಅಂದರೆ ಈಗಿನ ಬಂಗಾರ ಧಾಮದಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು.

ಬೆಳಿಗ್ಗೆ ಬಂಗಾರಪ್ಪನವರ ಪಾರ್ಥೀವ ಶರೀರ ಹೊತ್ತ ವಾಹನ ಕುಬಟೂರಿನಿಂದ ಹೊರಟ ಸಂದರ್ಭದಲ್ಲಿ ಮಾರ್ಗ ಮದ್ಯದ ಎಲ್ಲಾ ಹಳ್ಳಿಗಳ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತ್ತು. ರಂಗೋಲಿ ಹಾಕಿ ಆರತಿ ಬೆಳಗಿ ಬಂಗಾರಪ್ಪನವರ ಪಾರ್ಥೀವ ಶರೀರವನ್ನು ಮಹಿಳೆಯರು ಬರಮಾಡಿಕೊಂಡರು. ಪ್ರತಿ ಹಳ್ಳಿಗಳಲ್ಲಿ ಬಂಗಾರಪ್ಪ ಕಟೌಟ್ ಬ್ಯಾನರ್ ಗಳು ರಾರಾಜೀಸುತ್ತಿದ್ದವು. ಜನರು ಬೈಕ್ ಕಾರುಗಳಲ್ಲಿ ರ್ಯಾಲಿ ನಡೆಸಿದರು. ಬಂಗಾರಪ್ಪನವರ ಪರ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದ ದೃಷ್ಯಗಳು ಇನ್ನು ಹಸಿರಾಗಿಯೇ ಇದೆ. ಸುಮಾರು 6 ಕಿಲೋಮೀಟರ್ ದೂರ ಪೊಲೀಸರು ಅಂತಿಮಯಾತ್ರೆಯ ಮೆರವಣಿಗೆಯಲ್ಲಿ ಸರ್ಕಾರ ಗೌರವ ಸಲ್ಲಿಸಿದರು.ಸೊರಬ ಪಟ್ಟಣವಂತೂ ಜನಜಂಗುಳಿಯಿಂದಲೇ ತುಂಬಿತ್ತು. ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೊರಬದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಎಲ್ಲರ ಕಣ್ಣುಗಳು ಒದ್ದೆಯಾಗಿಯೇ ಇದ್ದವು. ಬಂಗಾರಪ್ಪ ಅಮರ್ ರಹೆ ಎಂಬ ಘೋಷಣೆಗಳು ಪದೇ ಪದೇ ಕೇಳಿಬರುತ್ತಿತ್ತು. ರಾಜಕೀಯ ಗಣ್ಯರು ಅಂತಿಮ ಸಂಸ್ಕಾರದ ವಿಧಿವಿಧಾನದಲ್ಲಿ ಭಾಗವಹಿಸಿ ಕಂಬನಿ ಮಿಡಿದರು. ಹೆಚ್ ಡಿ ಕುಮಾರಸ್ವಾಮಿ, ಬಿಎಸ್ ಯಡಿಯೂರಪ್ಪ ಕೆ.ಎಸ್ ಈಶ್ವರಪ್ಪ, ಬಸವನಗೌಡ ಪಾಟೀಲ್ ಯತ್ನಾಳ್ ಅಂದಿನ ಸರ್ಕಾರದ ಸಚಿವ ಸಂಪುಟವೇ ಅಂತಿಮ ಶವ ಸಂಸ್ಕಾರದ ಕಾರ್ಯಕ್ಕೆ ಸಾಕ್ಷಿಯಾಗಿತ್ತು. ಆದರೆ ಪುತ್ರ ಕುಮಾರ್ ಬಂಗಾರಪ್ಪ ಕುಟುಂಬ ಮಾತ್ರ ಬ್ಯಾರಿಕೇಡ್ ನಿಂದ ದೂರ ಉಳಿದು, ಅಂತಿಮ ವಿಧಿ ಕಾರ್ಯದಲ್ಲಿ ಭಾಗವಹಿಸಿತ್ತು.

ಇದು ಹಲವು ಚರ್ಚೆಗಳಿಗೆ ಅಂದು ಗ್ರಾಸವಾಗಿತ್ತು. ಪತ್ನಿ ಶಕುಂತಲ ಬಂಗಾರಪ್ಪರ ಅಣತಿಯಂತೆ ಕಿರಿಯ ಪುತ್ರ ಮಧು ಬಂಗಾರಪ್ಪ ಬಂಗಾರಪ್ಪರ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಬಂಗಾರಪ್ಪ ಅಭಿಮಾನಿಗಳು ಘೋಷಣೆ ಕೂಗುತ್ತಲೇ ಕಂಬನಿ ಮಿಡಿದರು. ಬಂಗಾರಪ್ಪ ಸಾವನ್ನಪ್ಪಿ ಇಂದಿಗೆ 14 ವರ್ಷ ಕಳೆದರೂ, ನೆನಪು ಇನ್ನು ಹಸಿರಾಗಿರುವುದು ಅವರ ಜೀವಂತಿಗೆ ಸಾಕ್ಷಿಯಾಗಿದೆ.