ಶಿವಮೊಗ್ಗ ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕೆಲಸ ಏನಾದರೂ ಸಿಗಬಹುದೇ ಎಂದು ಯವ ಸಮೂಹ ತನ್ನದೇ ದಾರಿಯಲ್ಲಿ ಹುಡುಕಾಡುತ್ತಿದೆ. ಅಲ್ಲದೆ ಲೋಕಲ್ನಲ್ಲಿಯೇ ಕೆಲಸ ನೀಡಬೇಕು ಎಂಬ ಅಭಿಯಾನವೂ ಈ ಸಂಬಂಧ ಜೋರಾಗಿ ನಡೆಯುತ್ತಿದೆ. ಇದರ ಬೆನ್ನಲ್ಲೆ ಉದ್ಯೋಗ ಕೊಡಿಸುತ್ತೇವೆ ಎಂಬ ಜಾಹಿರಾತುಗಳು ಸಹ ಅಬ್ಬರಿಸುತ್ತಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಮಲೆನಾಡು ಟುಡೇ ಈ ಮೊದಲೇ ಸುದ್ದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ಓದಿ FACT CHECK : ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಉದ್ಯೋಗಾವಕಾಶದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ
ಇದೀಗ ಇಂತಹ ಫೇಕ್ ಜಾಹಿರಾತುಗಳನ್ನು ನಂಬದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರು ಸಂದೇಶ ರವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸ್ತೇವೆ ಎಂಬಂತಹ ಫೇಕ್ ಜಾಹಿರಾತುಗಳು ಹರಿದಾಡುತ್ತಿದೆ ಎಂದು ನಕಲಿ ಜಾಹಿರಾತಿನ ಫೋಟೋವೊಂದನ್ನು ಷೇರ್ ಮಾಡಿದ್ದಾರೆ. ಈ ಜಾಹಿರಾತು ಹಾಗೂ ಇದರಲ್ಲಿರುವ ಮಾಹಿತಿ ಸತ್ಯವಾದುದಲ್ಲ. ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಫೇಕ್ ಜಾಹಿರಾತಿನ ಮೂಲ ಹುಡುಕಲಾಗುತ್ತಿದೆ ಎಂದು ಎಸ್ಪಿ ಸಂದೇಶ ರವಾನಿಸಿದ್ದಾರೆ.
ಇನ್ನು ಎಸ್ಪಿಯವರು ಷೇರ್ ಮಾಡಿದ್ದ ಜಾಹಿರಾತಿನಲ್ಲಿ ಶಿವಮೊಗ್ಗ ಏರ್ಪೋರ್ಟ್ನ ಫೋಟೋ ಬಳಸಿ ವಿವಿಧ ವಿಭಾಗಗಳಲ್ಲಿ ಹುದ್ದೆ ಕೊಡಿಸುವುದಾಗಿ ಪ್ರಕಟಿಸಲಾಗಿತ್ತು. ಸದ್ಯ ಇದು ನಕಲಿ ಎಂಬುದು ಗೊತ್ತಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಉದ್ಯೋಗವಕಾಶಕ್ಕಾಗಿ ಹಾತೊರೆಯುತ್ತಿರುವವರನ್ನು ಗುರಿಯಾಗಿಸಿಕೊಂಡು ಇಂತಿಷ್ಟು ಹಣ ಕಟ್ಟಿ ಎನ್ನುವ ಭೋಗಸ್ ಕಂಪನಿಗಳು ಶಿವಮೊಗ್ಗ ನಗರದಲ್ಲಿ ತನ್ನದೆ ನೆಟ್ವರ್ಕ್ ನಲ್ಲಿ ಕೆಲಸ ಮಾಡುತ್ತಿವೆ. ಅಂತಹ ಕಂಪನಿಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇನ್ನೂ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಅಧಿಕಾರಿ ವಲಯದ ಮೂಲಗಳ ಪ್ರಕಾರ, ಇದುವರೆಗೂ ಏರ್ಪೋರ್ಟ್ಗೆ ಸಂಬಂಧಿಸಿದ ಉದ್ಯೋಗವಕಾಶಗಳ ಬಗ್ಗೆ ಪ್ರಕಟಣೆಯು ಸಹ ಹೊರಬಿದ್ದಿಲ್ಲ.