hebbet manja rowdy sheeter ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಬೆಂಗಳೂರು ಸೆಂಟ್ರಲ್ ಜೈಲಿನಿಂದ ಕರೆಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ದೂರಿನ ಆಧಾರದಲ್ಲಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರೊಂದು ದಾಖಲಾಗಿದೆ.
ಹೆಬ್ಬೆಟ್ ಮಂಜನ ಹೆಸರಲ್ಲಿ ನಾಗ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ಒಂದೆರಡು ಸಲ ಹಣ ಕೊಟ್ಟಿರುವ ಉದ್ಯಮಿ ಬಳಿಕ ಕಾಟ ತಡೆಯಲಾಗದೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕೇಸ್ ತನಿಖೆ ಆರಂಭಿಸಿರುವ ಇನ್ಸ್ಪೆಕ್ಟರ್ ಗುರುರಾಜ್ ಪರಪ್ಪನ ಅಗ್ರಹಾರವನ್ನು ಕೇಂದ್ರಿಕರಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಹಾಗೆ ನೋಡಿದರೆ ಶಿವಮೊಗ್ಗಕ್ಕೆ ಪರಪ್ಪನ ಅಗ್ರಹಾರದಿಂದ ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ ಈ ಹಿಂದೆ ಬಚ್ಚನ್ ಎಂಬಾತ ಮಾಡಿದ್ದ ಬೆದರಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇನ್ನೂ ಇಂತಹ ಬೆದರಿಕೆ ಹಾಗೂ ವಸೂಲಿ ಪ್ರಕರಣಗಳು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿನ ರೌಡಿ ಅತಿಥಿಗಳು ಮಾಡುತ್ತಿದ್ದಾರೆ ಅನ್ನುವ ಆರೋಪವೂ ದಟ್ಟವಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಬಂಕ್ ಬಾಲು ಕೇಸ್ನಲ್ಲಿ ಅಂದರ್ ಆಗಿದ್ದವರು, ಟೀನೇಜ್ ಹುಡುಗರನ್ನು ಬಳಸಿಕೊಂಡು ತಮ್ಮ ಪರವಾಗಿ ಹೊರಗಡೆ ಹವಾ ಮೇಂಟೇನ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಳೇ ಶಿವಮೊಗ್ಗದ ಕೆಲ ಪ್ರದೇಶಗಳಲ್ಲಿ ಒಟ್ಟುಗೂಡುವ ಹುಡುಗರು, ಜೈಲಿನಲ್ಲಿನ ಖಾಯಂ ಅತಿಥಿಗಳು ಹೇಳಿದಂತೆ ನಡೆಯುತ್ತಿದ್ದಾರೆ. ಬುಲೆಟ್ ಕೊಡಿಸ್ತೀನಿ, ಅಂಗಡಿ ಇಟ್ಟುಕೊಡ್ತೀನಿ, ಲವ್ ಕೇಸ್ ಸಕ್ಸಸ್ ಮಾಡಿಕೊಡ್ತೀನಿ, ಎಂಬಿತ್ಯಾದಿ ಆಮೀಷಗಳನ್ನ ಒಡ್ಡಿ ಟೀನೇಜ್ ಹುಡುಗರಿಂದ ವಸೂಲಿ ಮಾಡುವಂತಹ ಕೆಲಸಗಳು ನಡೆಯುತ್ತಿವೆ. ತಮ್ಮ ಕೇಸ್ನ ಖರ್ಚಿಗಾಗಿ, ಎಲ್ಲೆಲ್ಲಿ ಯಾರ ಬಳಿಯಲ್ಲಿ ಎಷ್ಟು ಹಣ ವಸೂಲಿ ಮಾಡಬೇಕು ಎನ್ನುವುದನ್ನ ಆರೋಪಿಗಳು ತಮ್ಮದೆ ಮೂಲಗಳ ಮೂಲಕ, ತಮ್ಮ ಶಿಷ್ಯರಿಗೆ ತಿಳಿಸುತ್ತಿದ್ದಾರೆ.
ಜನರಲ್ಲಿ ಮೂಡುವ ಭಯ ಹಾಗೂ ಖರ್ಚಿಗೆ ಸಿಗುವ ಹಣ ಎಳೆ ವಯಸ್ಸಿನ ಹುಡುಗರನ್ನ ಪಾತಕ ಜಗತ್ತಿನತ್ತ ಸೆಳೆಯುತ್ತಿದೆ. ಬೀಟ್ ಪೊಲೀಸರಿಗೆ ಈ ಮಾಹಿತಿ ತಿಳಿಯದೇ ಇಲ್ಲ. ಅದರಲ್ಲೂ ಅನುಭವಸ್ಥ ಸಿಬ್ಬಂದಿಗಳಿಗೆ ಅವರ ಕಣ್ಗಾವಲಿನಲ್ಲಿರುವ ಏರಿಯಾದಲ್ಲಿ ಗುಂಪುಗೂಡುವ ಯುವಕರ ಪಡೆಯ ಮಾಹಿತಿ ಇದ್ದೆ ಇದೆ. ಆದರೆ ಕ್ರೈಂ ದಾಖಲಾಗದ ಹೊರತು ಯಾವೊಂದು ಪ್ರಕರಣಗಳು ಹೊರಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹುಡುಗರು, ಜೈಲಲ್ಲಿರುವ ಆರೋಪಿಗಳನ್ನ ನಮ್ ಬಾಸ್ ಎಂದುಕೊಂಡು ಓಡಾಡುತ್ತಿದ್ದಾರೆ.
ನಗರದಲ್ಲಿ ಬೀದಿ ಬೀದಿಯಲ್ಲಿ ನಡೆಯುವ ರಾತ್ರಿ ಬರ್ತ್ಡೇಗಳನ್ನು ನೋಡಿದರೆ, ಸದ್ದಿಲ್ಲದೇ ಶಿವಮೊಗ್ಗದಲ್ಲಿ ಹೊಸದೊಂದು ತಲೆಮಾರಿನ ರೌಡಿಸಂ ಜಾರಿಗೆ ಬರುತ್ತಿದೆ ಎನ್ನುವುದು ಅರ್ಥವಾಗುತ್ತದೆ. ಬೀಟ್ ವ್ಯವಸ್ಥೆಯಲ್ಲಿನ ಪೊಲೀಸರು ಇಂತಹ ಗುಂಪುಗೂಡುವಿಕೆಯನ್ನು ತಡೆದು, ಸಣ್ಣ ಪುಟ್ಟ ಗಲಾಟೆಯಲ್ಲಿಯೇ, ಟೀನೇಜ್ ಹುಡುಗರ ಆಟಾಟೋಪಗಳನ್ನ ನಿಯಂತ್ರಿಸಬೇಕಿದೆ. ಆಗಲಷ್ಟೆ ಯಾರದ್ದೋ ಹಿತಾಸಕ್ತಿ ತಮ್ಮ ಜೀವನವನ್ನ ಕ್ರೈಂ ಶೀಟ್ನಲ್ಲಿ ದಾಖಲಿಸುವಂತಹ ಪ್ರಮೇಯವನ್ನು ತಡೆಯಬಹುದು.