ಶಿವಮೊಗ್ಗ ಪ್ರವಾಸದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಸೂಚನೆ! ಹೊಸನಗರ , ಸೊರಬಕ್ಕೆ ಹೊಸತು! ಜಿಲ್ಲೆಗೆ ಸಂಬಂಧಿಸಿದಂತೆ ಏನೆಲ್ಲಾ ಹೇಳಿದ್ರು ! ಓದಿ

ಹಂಚಿಕೊಳ್ಳಿ
WhatsApp Facebook X Telegram
Health Minister UT Khader Visits Shivamogga Directives on KFD Readiness and Hospital Tariff Display
Health Minister UT Khader Visits Shivamogga Directives on KFD Readiness and Hospital Tariff Display

ಸುದ್ದಿಯ ಸ್ಥಳ: Hosanagara, Shivamogga, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇವತ್ತು ಶಿವಮೊಗ್ಗಕ್ಕೆ ಡಿವಿಎಸ್ ಹಬ್ಬ ಕಾರ್ಯಕ್ರಮದ ನಿಮಿತ್ತ ಬಂದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಯು.ಟಿ. ಖಾದರ್ ಜಿಲ್ಲಾ ಪಂಚಾಯತಿ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಏನಂದರು? ಪ್ರಮುಖ ಅಂಶಗಳು:

  • ಖಾಸಗಿ ಆಸ್ಪತ್ರೆಗಳು ತಾವು ನೀಡುವ ಪ್ರತಿಯೊಂದು ಚಿಕಿತ್ಸೆಯ ದರವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರಕಟಿಸಬೇಕು ಹಾಗೂ ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
  • ಕೆಲವು ಔಷಧಿಗಳ ಖರೀದಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗಿದೆ. ರೋಗಿಗಳಿಗೆ ತೊಂದರೆಯಾಗದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಅಗತ್ಯ ಔಷಧ ಖರೀದಿಸಿ ಪೂರೈಸಲು ಸೂಚಿಸಿದ್ದು, ಶಿವಮೊಗ್ಗದಲ್ಲಿ ಔಷಧ ಕೊರತೆ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
  • ಹಾವು ಕಡಿತಕ್ಕೆ ಬಳಸುವ ಔಷಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 10 ವೈಲ್, ತಾಲೂಕು ಆಸ್ಪತ್ರೆಗಳಲ್ಲಿ 30 ವೈಲ್ ಹಾಗೂ ಜಿಲ್ಲಾ ಔಷಧ ಉಗ್ರಾಣಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿರಬೇಕು ಎಂದು ಸೂಚಿಸಿದರು.
  • ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ನಿರ್ಮಿಸುವ ಉದ್ದೇಶ ಸರ್ಕಾರದ ಮುಂದಿದ್ದು, ವೈದ್ಯಕೀಯ ಕಾಲೇಜು ಇರುವ ತಾಲೂಕಿನಲ್ಲಿ ನಿರ್ಮಿಸಬೇಕೇ ಅಥವಾ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಅನುಕೂಲವಾಗುವ ಮಧ್ಯವರ್ತಿ ಸ್ಥಳ ಆಯ್ಕೆ ಮಾಡಬೇಕೇ ಎಂಬ ಚರ್ಚೆ ನಡೆಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
  • ನಕಲಿ ವೈದ್ಯರ ಹಾವಳಿ ನಿಯಂತ್ರಿಸಲು ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅರ್ಹತೆ ಇಲ್ಲದೆ ವೈದ್ಯಕೀಯ ಸೇವೆ ನೀಡುವವರು ರಾಜ್ಯ ತೊರೆಯಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
  • ಆಯುರ್ವೇದ ವೈದ್ಯರು ನಿಯಮಾನುಸಾರ ಅನುಮತಿಸಲಾದ ಔಷಧಗಳನ್ನು ಮಾತ್ರ ನೀಡಬೇಕು, ಕಾನೂನುಬದ್ಧ ವ್ಯಾಪ್ತಿ ಮೀರಿ ಇಂಜೆಕ್ಷನ್ ಸೇರಿದಂತೆ ಇತರೆ ಚಿಕಿತ್ಸಾ ವಿಧಾನ ಅನುಸರಿಸಬಾರದು ಎಂದು ಸ್ಪಷ್ಟಪಡಿಸಿದರು.
  • ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣಕ್ಕೆ ರಾಜ್ಯದಾದ್ಯಂತ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, 16 ವರ್ಷದೊಳಗಿನ ಮಕ್ಕಳಿಗೆ ಪೋಷಕರು ಲಸಿಕೆ ಹಾಕಿಸಬೇಕು ಎಂದು ಕರೆ ನೀಡಿದರು.
  • ವೈದ್ಯರು ನಿಗದಿತ ಸಮಯದಲ್ಲಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸಬೇಕು, ವೈದ್ಯಕೀಯ ಹಾಗೂ ಆಪರೇಷನ್ ಥಿಯೇಟರ್ ದಾಖಲೆಗಳ ನಿರ್ವಹಣೆಗೆ ಸ್ಪಷ್ಟ ಎಸ್‌ಒಪಿ ರೂಪಿಸಬೇಕು ಹಾಗೂ ಮುಂದಿನ 15 ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಮತ್ತು ನಂತರದ 15 ದಿನಗಳಲ್ಲಿ ಮತ್ತೊಂದು ಸುತ್ತಿನ ಜಾಗೃತಿ ಅಭಿಯಾನ ನಡೆಸಿ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯಗಳ ಮಾಹಿತಿ ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.

ಮಂಗನ ಕಾಯಿಲೆ (ಕೆಎಫ್‌ಡಿ) ವಿಚಾರದಲ್ಲಿ ಮಾತನಾಡಿದ ಅವರು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳ ವಿಶೇಷ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಕೆಎಫ್‌ಡಿ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಂತರ್‌ ಇಲಾಖಾ ಸಭೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಲಾಗಿದೆ. ಅಡಿಕೆ ತೋಟ, ಕೃಷಿ ಪ್ರದೇಶ ಹಾಗೂ ಅರಣ್ಯಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಉಣ್ಣೆಗಳಿಂದ ರಕ್ಷಣೆ ಮತ್ತು ಬಿಸಿನೀರಿನಲ್ಲಿ ಸ್ನಾನ ಮಾಡುವಂತಹ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಮೃತ ಮಂಗಗಳು ಕಂಡುಬಂದರೆ ಆರೋಗ್ಯ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಗ್ರಾಮ ಪಂಚಾಯಿತಿ ಕಾರ್ಯಪಡೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇನ್ನೂ ಈ ವೇಳೆ ಜ್ವರದ ಲಕ್ಷಣಗಳೊಂದಿಗೆ ಕೆಎಫ್‌ಡಿ ಶಂಕೆ ಕಂಡುಬಂದರೆ ರಕ್ತದ ಮಾದರಿ ಸಂಗ್ರಹಿಸಿ ಶಿವಮೊಗ್ಗದ ವೈರಾಣು ರೋಗ ಪರೀಕ್ಷಾ ಪ್ರಯೋಗಾಲಯಕ್ಕೆ (VDL) ಕಳುಹಿಸಲು ವ್ಯವಸ್ಥೆ ಮಾಡಲಾಗಿದ್ದು, ಸೋಂಕು ದೃಢಪಟ್ಟರೆ ತಾಲೂಕು ಆಸ್ಪತ್ರೆಗಳ ವಿಶೇಷ ವಾರ್ಡ್‌ಗಳಲ್ಲಿ ಮತ್ತು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಹೊಸನಗರ ತಾಲೂಕಿನ ದೂರದ ಗ್ರಾಮಗಳ ಜನರಿಗೆ ಅನುಕೂಲವಾಗುವಂತೆ ಸುಮಾರು 4ರಿಂದ 5 ಎಕರೆ ಜಾಗದಲ್ಲಿ ಸಮುದಾಯ ಆರೋಗ್ಯ ಕೇಂದ್ರ (CHC) ಸ್ಥಾಪಿಸಲು 35 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಸೊರಬ ತಾಲೂಕು ಆಸ್ಪತ್ರೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆಯಿದ್ದು, ಪ್ರತಿದಿನ 600ರಿಂದ 700 ಹೊರರೋಗಿಗಳು ಹಾಗೂ ಸುಮಾರು 50 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿನ ಇಎನ್‌ಟಿ, ಅರಿವಳಿಕೆ ಮತ್ತು ಸ್ತ್ರೀರೋಗ ತಜ್ಞರ ಕೊರತೆ ನೀಗಿಸಲು ಹಾಗೂ ಸೌಲಭ್ಯಗಳ ಸಮರ್ಪಕ ಬಳಕೆಗೆ ಸಚಿವರು ಸೂಚಿಸಿದರು.

ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಕಾಲೇಜಾಗಿ ಪರಿವರ್ತನೆಯಾದ ಬಳಿಕ ಬಡವರು ಮತ್ತು ಬಿಪಿಎಲ್ ಕಾರ್ಡ್‌ದಾರರಿಗೆ ನಿರೀಕ್ಷಿತ ಸೌಲಭ್ಯ ದೊರೆಯುತ್ತಿಲ್ಲ, ವೈದ್ಯರು, ತಾಂತ್ರಿಕ ಸಿಬ್ಬಂದಿ ಮತ್ತು ಸೇವೆಗಳ ಕೊರತೆಯಿಂದ ಒತ್ತಡ ಹೆಚ್ಚಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಗಮನ ಸೆಳೆದರು. ಶಿವಮೊಗ್ಗಕ್ಕೆ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡುವಂತೆ ಹಾಗೂ ಸಾರ್ವಜನಿಕರ ಕುಂದುಕೊರತೆ ಪರಿಶೀಲನೆಗೆ ಪ್ರತ್ಯೇಕ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಆಸ್ಪತ್ರೆಯ ಅಧೀಕ್ಷಕ ಡಾ. ತಿಮ್ಮಪ್ಪ ಅವರೊಂದಿಗೆ ಚರ್ಚಿಸಿ ಆಡಳಿತ ವ್ಯವಸ್ಥೆ ಹಾಗೂ ಸಮಿತಿ ರಚನೆ ಪ್ರಕ್ರಿಯೆ ಪರಿಶೀಲಿಸುವಂತೆ ಸೂಚಿಸಿದರು.

ಮೆಗ್ಗಾನ್ ಆಸ್ಪತ್ರೆಗೆ ಪ್ರತಿದಿನ 2,000ಕ್ಕೂ ಹೆಚ್ಚಿನ ಹೊರರೋಗಿಗಳು ಮತ್ತು 200ರಷ್ಟು ಒಳರೋಗಿಗಳು ದಾಖಲಾಗುತ್ತಿದ್ದು, ಚಿಕ್ಕಮಗಳೂರು, ಕಾರವಾರ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಆರ್ಥೋಪೆಡಿಕ್ಸ್ ಮತ್ತು ಮಕ್ಕಳ ವಿಭಾಗಗಳಿಗೆ ರೋಗಿಗಳು ಬರುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು.

ಜಿಲ್ಲೆಯ ಸುಮಾರು 80 ಸಾವಿರ ಇಎಸ್‌ಐ ಕಾರ್ಡ್‌ದಾರರಿಗೆ ಮೆಗ್ಗಾನ್‌ನಲ್ಲಿ ಪ್ರತ್ಯೇಕ ಕೌಂಟರ್ ಸ್ಥಾಪಿಸಿ ಮಾರ್ಗದರ್ಶನ ಮತ್ತು ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಬಾನು, ಜಿಲ್ಲಾಧಿಕಾರಿ ಪ್ರಕಾಶ್ ಟಿ.ಜಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಡಿಹೆಚ್‌ಒ ಕಾಂತರಾಜ್ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor