ಸುದ್ದಿಯ ಸ್ಥಳ: Bhadravati, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ತುಮರಿ, ಭದ್ರಾವತಿ ಹಾಗೂ ಕಾರ್ಗಲ್ ವ್ಯಾಪ್ತಿಯಲ್ಲಿ ವರದಿಯಾಗಿರುವ ಮೂರು ಪ್ರತ್ಯೇಕ ಘಟನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ. ಗೂಡಂಗಡಿ ಹಾಗೂ ಅಡಿಕೆ ತೋಟಗಳಲ್ಲಿ ಪಂಪ್ಸೆಟ್ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ ಬೆಳೆನಷ್ಟ ಹಾಗೂ ಸಾಲದ ಸಂಕಷ್ಟದಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ಶಾರ್ಟ್ ನ್ಯೂಸ್ / ಗೂಡಂಗಡಿಯಲ್ಲಿ ಕಳವು; ಆರೋಪಿ ಬಂಧನ
ತುಮರಿ ಸಮೀಪದ ಬೇರಾಳ ಗ್ರಾಮದ ಗೂಡಂಗಡಿಯ ಬೀಗ ಒಡೆದು ಕಳ್ಳತನ ಮಾಡಿದ್ದ ಆರೋಪದಡಿ ನಗರ ಮೂಲದ ರಾಕೇಶ್ ಎಚ್.ಕೆ. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 21ರಂದು ರಾತ್ರಿ ಕಳ್ಳತನ ನಡೆದಿದ್ದು, ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪಿಎಸ್ಐ ಶ್ರೀಪತಿ ಗಿನ್ನಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಕಾರ್ಯಾಚರಣೆಯಲ್ಲಿ ಎಎಸ್ಐ ಹಾಲಪ್ಪ, ಹೆಡ್ ಕಾನ್ಸ್ಟೆಬಲ್ಗಳಾದ ಅಣ್ಣಪ್ಪ, ದಿನೇಶ್, ಸಂದೀಪ್, ಕಾನ್ಸ್ಟೆಬಲ್ಗಳಾದ ಪುರುಷೋತ್ತಮ್, ರಾಮ್ ನಾಯ್, ಭರತ್, ಅರುಣ್, ಮಲ್ಲಪ್ಪ, ಹನೀಫ್ ಹಾಗೂ ಎಎನ್ಸಿ ವಿಭಾಗದ ಗುರುರಾಜ್ ಇಂದ್ರೇಶ್ ಪಾಲ್ಗೊಂಡಿದ್ದರು.
ಅಡಿಕೆ ತೋಟಗಳಲ್ಲಿ ಪಂಪ್ಸೆಟ್ ಕಳವು; ಆರೋಪಿ ಬಂಧನ
ಭದ್ರಾವತಿ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಪಂಪ್ಸೆಟ್ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ರಬ್ಬರ್ ಕಾಡು ಗ್ರಾಮದ ಚಂದ್ರ (40) ಎಂಬಾತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಇತ್ತೀಚೆಗೆ ಬಾಳೆಮಾರನಹಳ್ಳಿ ಗ್ರಾಮದ ಮಲ್ಲೇಶಪ್ಪ ಎ. ಹಾಗೂ ಗುರುಮೂರ್ತಿ ಎಂಬುವವರ ಅಡಿಕೆ ತೋಟಗಳಲ್ಲಿ 2 ಎಚ್ಪಿ ಸಾಮರ್ಥ್ಯದ ಪಂಪ್ಸೆಟ್ಗಳು ಕಳವಾಗಿದ್ದವು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ತೋಟದ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಹಾಗೂ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗಳ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಅಡಿಕೆ ಬೆಳೆನಷ್ಟ, ಸಾಲದ ಸಂಕಷ್ಟ; ರೈತ ಆತ್ಮಹತ್ಯೆ
ಕಾರ್ಗಲ್ ವ್ಯಾಪ್ತಿಯ ಹೆಬ್ಬಯ್ಯನ ಕೇರಿ ಸಮೀಪ ರೈತ ಕೃಷ್ಣಪ್ಪ (62) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲೆಚುಕ್ಕಿ ರೋಗದಿಂದ ಅಡಿಕೆ ಬೆಳೆ ನಷ್ಟವಾಗಿದ್ದು, ಸಾಲ ಮರುಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಕೃಷಿ ಚಟುವಟಿಕೆಗಳಿಗಾಗಿ ಕೃಷ್ಣಪ್ಪ ಅವರು ವಿವಿಧ ಮೂಲಗಳಿಂದ ಒಟ್ಟು ₹13 ಲಕ್ಷ ಸಾಲ ಪಡೆದಿದ್ದರು ಎಂದು ಅವರ ಪುತ್ರ ರಮೇಶ್ ಕೆ. ನಾಯ್ಕ ಅವರು ಕಾರ್ಗಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿರುವವರು ಟೆಲಿಮನಸ್ ಸಹಾಯವಾಣಿ 14416 ಅಥವಾ 080-25497777, 9886444075 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
