ಸುದ್ದಿಯ ಸ್ಥಳ: Thirthahalli, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಭದ್ರಾ ಅರಣ್ಯಕ್ಕೆ 47 ಕಾಡಾನೆಗಳನ್ನು ತಂದು ಬಿಡುವ ವಿಚಾರವಾಗಿ ನಯನಾ ಮೋಟಮ್ಮ ಸೇರಿದಂತೆ ಮೂರು ತಾಲೂಕಿನ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ. ಈ ವಿಚಾರದಲ್ಲಿ ನಾವು ರಾಜೀನಾಮೆ ನೀಡುವುದಿಲ್ಲ, ಬದಲಾಗಿ ಸರ್ಕಾರವೇ ರಾಜೀನಾಮೆ ಕೊಡುವಂತೆ ಮಾಡುತ್ತೇವೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಮೂವರು ಮೃತಪಟ್ಟಿದ್ದು, ಈ ಕುರಿತು ಅಲ್ಲಿ ಪ್ರತಿಭಟನೆಗಳು ನಡೆದಿವೆ. ಆ ಒತ್ತಡಕ್ಕೆ ಮಣಿದು ಹಾಸನದ 47 ಆನೆಗಳನ್ನು ಭದ್ರಾ ಅರಣ್ಯಕ್ಕೆ ಬಿಡಲು ಸರ್ಕಾರ ನಿರ್ಧರಿಸಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಪ್ರತಿಯೊಂದು ಆನೆಗೂ ಸಂಚರಿಸಲು ನಿರ್ದಿಷ್ಟ ಪ್ರಮಾಣದ ಜಾಗ ಬೇಕಾಗುತ್ತದೆ. ಭದ್ರಾ ಅಭಯಾರಣ್ಯದಲ್ಲಿ ಈಗಾಗಲೇ ಸಾಕಷ್ಟು ಆನೆಗಳಿದ್ದು, ಹೆಚ್ಚುವರಿಯಾಗಿ ಆನೆಗಳನ್ನು ಬಿಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಈಗಾಗಲೇ ಒಂದು ಕಾಡಾನೆ ತೀರ್ಥಹಳ್ಳಿಯಿಂದ ಹೊಸನಗರದ ಕಡೆಗೆ ಸಂಚರಿಸುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಫಸಲು ಕೈಗೆ ಬರುವ ಈ ನಿರ್ಣಾಯಕ ಸಂದರ್ಭದಲ್ಲಿ ಕಾಡಾನೆಗಳು ಬೆಳೆ ಲೂಟಿ ಮಾಡಿದರೆ ರೈತರು ಮಣ್ಣು ತಿನ್ನಬೇಕಾಗುತ್ತದೆ. ನಮ್ಮ ಭಾಗದಲ್ಲಿ ಕಾಡಿನ ಒಳಗಡೆಯೇ ಜನವಸತಿ ಮನೆಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಆನೆಗಳನ್ನು ಭದ್ರಾ ಅರಣ್ಯಕ್ಕೆ ಅಟ್ಟಬಾರದು. ಎಲ್ಲಿ ಸೂಕ್ತ ಸ್ಥಳಾವಕಾಶವಿದೆಯೋ ಅಲ್ಲಿಗೆ ಆನೆಗಳನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ಶಾಸಕರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ, ಆದರೆ ನಾವು ರಾಜೀನಾಮೆ ನೀಡದೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುತ್ತೇವೆ. ಸರ್ಕಾರದ ಬೇಜವಾಬ್ದಾರಿ ನಡೆ ಖಂಡಿಸಿ ಮುಂದಿನ ದಿನಗಳಲ್ಲಿ ಪ್ರವಾಸ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಮತ್ತು ಅರಣ್ಯ ಇಲಾಖೆ ಕಚೇರಿಗೆ ಘೇರಾವ್ ಹಾಕಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ಅರಣ್ಯ ಇಲಾಖೆಯವರು ಎಲಿಫೆಂಟ್ ಟ್ರೆಂಚ್ ನಿರ್ಮಿಸುವ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ಟ್ರೆಂಚ್‌ಗಾಗಿ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು ಮತ್ತು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಒಟ್ಟಾರೆ ವನ್ಯಜೀವಿಗಳ ರಕ್ಷಣೆಯ ಹೆಸರಿನಲ್ಲಿ ಅರಣ್ಯ ಇಲಾಖೆ ರೈತರ ಬೆಳೆಯನ್ನು ನಾಶಪಡಿಸುತ್ತಿದೆ ಎಂದು ಆರೋಪಿಸಿದರು.
