ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿವಿಧ ಸಂಸ್ಥೆಗಳು ತಮ್ಮ ವಿಮಾನ ಹಾರಾಟವನ್ನು ನಿಲ್ಲಿಸಿದ್ದ ಬೆನ್ನಲ್ಲೆ ಮುಂದೇನು ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದವು. ಇದರ ಬೆನ್ನಲ್ಲೇ ಸಂಸದ ಬಿ.ವೈ. ರಾಘವೇಂದ್ರ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಕೇಂದ್ರ ಸರ್ಕಾರದ ಉಡಾನ್ 6.0 (UDAN 6.0) ಯೋಜನೆಯ ಟೆಂಡರ್ನಲ್ಲಿ ಶಿವಮೊಗ್ಗ ಏರ್ಪೋರ್ಟ್ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಏರ್ಪೋರ್ಟ್ಗೆ ಸಂಬಂಧಿಸಿದಂತೆ ಇತ್ತೀಚೆಗೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಇದೀಗ ವಿಮಾನಯಾನ ಕ್ಷೇತ್ರದಿಂದ ಒಳ್ಳೆಯ ಸುದ್ದಿಗಳು ಬರುತ್ತಿದ್ದು, ಕೇಂದ್ರ ಸರ್ಕಾರದ ಉಡಾನ್ ಟೆಂಡರ್ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಶೇಷವೆಂದರೆ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ ಯಾವುದೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರೂ ಉಡಾನ್ ಯೋಜನೆಯಡಿ ಪ್ರಯಾಣಿಕರಿಗೆ ಸಬ್ಸಿಡಿ ಸೌಲಭ್ಯ ದೊರೆಯಲಿದ್ದು, ಈ ಅಂಶವನ್ನು ಟೆಂಡರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಸಂಸದರು ವಿವರಿಸಿದರು
ಉಡಾನ್ ಯೋಜನೆಯಡಿ ವಿಮಾನಯಾನ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲು ಇನ್ನೂ 4 ತಿಂಗಳು ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರವು ಕನಿಷ್ಠ ಎರಡು ಮಾರ್ಗಗಳಲ್ಲಾದರೂ ವಿಮಾನ ಸೇವೆ ಒದಗಿಸಬೇಕು. ಪ್ರಮುಖವಾಗಿ ಶಿವಮೊಗ್ಗ-ಬೆಂಗಳೂರು ಮತ್ತು ಶಿವಮೊಗ್ಗ-ಹೈದರಾಬಾದ್ ಮಾರ್ಗಗಳಿಗೆ ವಿಮಾನ ಸೇವೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿರುವುದಾಗಿ ಅವರು ಹೇಳಿದರು.
ಡಿಸೆಂಬರ್ ತಿಂಗಳ ಒಳಗಾಗಿ ಖಾಸಗಿ ಏರ್ಲೈನ್ಸ್ ಸಂಸ್ಥೆಗಳು ಇದೇ ಮಾರ್ಗಗಳಲ್ಲಿ ಹಾರಾಟ ಆರಂಭಿಸಿದರೆ, ರಾಜ್ಯ ಸರ್ಕಾರ ತಾನು ಒದಗಿಸಿದ ವಿಮಾನ ಸೇವೆಯನ್ನು ಹಿಂಪಡೆಯಬಹುದು ಎಂದು ಸಲಹೆ ನೀಡಿದ ರಾಘವೇಂದ್ರ ಅವರು, ಈಗಾಗಲೇ ತಾವು ಮೂರು ಪ್ರಮುಖ ಏರ್ಲೈನ್ಸ್ ಸಂಸ್ಥೆಗಳೊಂದಿಗೆ ಈ ಕುರಿತು ಮಾತುಕತೆ ನಡೆಸಿರುವುದಾಗಿ ಭರವಸೆ ನೀಡಿದರು.
