ಶಿವಮೊಗ್ಗ :  VAO ನೇಮಕಾತಿ ಬಿಗ್ ಅಪ್‌ಡೇಟ್: ಶಿವಮೊಗ್ಗ ಜಿಲ್ಲೆಯ ಆಯ್ಕೆ ಪಟ್ಟಿ ಪ್ರಕಟ, ದಾಖಲೆ ಪರಿಶೀಲನೆಗೆ ದಿನಾಂಕ ಫಿಕ್ಸ್! 

ಹಂಚಿಕೊಳ್ಳಿ
WhatsApp Facebook X Telegram
Shivamogga VAO Recruitment 2026 ಗೂಗಲ್_ ಚಿತ್ರ
Shivamogga VAO Recruitment 2026 ಗೂಗಲ್_ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ : ಕಂದಾಯ ಇಲಾಖೆಯಲ್ಲಿ ಖಾಲಿ ಇದ್ದ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರದಿಂದ ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 

ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಸೇರಿದಂತೆ ಪತ್ರಿಕೆ-1 ಹಾಗೂ ಪತ್ರಿಕೆ-2ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈಗಾಗಲೇ ಅಧಿಕೃತವಾಗಿ ಪ್ರಕಟಿಸಿದೆ.

ಶಿವಮೊಗ್ಗ ಜಿಲ್ಲಾ ಕಂದಾಯ ಘಟಕದ ವ್ಯಾಪ್ತಿಯಲ್ಲಿ ಬರುವ ಒಟ್ಟು 18 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ 1,111 ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಒದಗಿಸಲಾಗಿತ್ತು. ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು-2021ರ ಅನ್ವಯ ಅರ್ಹತೆ ಪಡೆದಿರುವ ಈ 1,111 ಅಭ್ಯರ್ಥಿಗಳ ಪೈಕಿ, ಅನುಮೋದಿತ ಹುದ್ದೆಗಳಿಗೆ ಅನುಗುಣವಾಗಿ ಪ್ರಾಧಿಕಾರ ನೀಡಿರುವ ಮೆರಿಟ್ ಆಧಾರದ ಮೇಲೆ 1:3 ಅನುಪಾತದ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಶಿವಮೊಗ್ಗ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ https://shivamogga.nic.in ನಲ್ಲಿ ಪ್ರಕಟಿಸಲಾಗಿದೆ. 

ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ತಾವು ಕ್ಲೈಮ್ ಮಾಡಿರುವ ವಿವಿಧ ಮೀಸಲಾತಿಗಳಿಗೆ ಸಂಬಂಧಿಸಿದಂತೆ ನಿಗದಿತ ದಿನಾಂಕದೊಳಗೆ ಪಡೆದಿರುವ ಮೂಲ ಪ್ರಮಾಣಪತ್ರಗಳು ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯ ಮೂಲ ಅಂಕಪಟ್ಟಿಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ. ಇದಕ್ಕಾಗಿ ದಿನಾಂಕ 07.12.2026 ರಿಂದ 08.12.2026 ರವರೆಗೆ ಬೆಳಿಗ್ಗೆ 11:00 ಗಂಟೆಯಿಂದ ಸಂಜೆ 5:00 ಗಂಟೆಯೊಳಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖುದ್ದಾಗಿ ಹಾಜರಾಗಲು ಸೂಚಿಸಲಾಗಿದೆ. ನಿಗದಿತ ಸಮಯಕ್ಕೆ ಗೈರುಹಾಜರಾಗುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. 

ತೃತೀಯ ಲಿಂಗಿ ವರ್ಗದಲ್ಲಿ ನಿಗದಿತ ಅನುಪಾತಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣ, ಆ ವರ್ಗವನ್ನು ಹೊರತುಪಡಿಸಿ ಉಳಿದ ಮೀಸಲಾತಿ ಪ್ರವರ್ಗಗಳ ಅಡಿಯಲ್ಲಿ 1:3 ಅನುಪಾತದಂತೆ ಒಟ್ಟು 51 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಆಯ್ಕೆ ಸಮಿತಿಯ ಅಧ್ಯಕ್ಷರು ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor