ಸುದ್ದಿಯ ಸ್ಥಳ: Sagara, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ನಗರದ ಸಾಗರ ರಸ್ತೆ ಬಳಿಯ ರಿಂಗ್ ರೋಡ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತರನ್ನು ಕಿರಣ್ ಜಿ (28) ಹಾಗೂ ಅವರ ಪತ್ನಿ ಸೌಮ್ಯ (22) ಎಂದು ಗುರುತಿಸಲಾಗಿದೆ. ಕಿರಣ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಿರಣ್ ಮತ್ತು ಸೌಮ್ಯ ಅವರ ವಿವಾಹವಾಗಿ ಕೇವಲ ಒಂದೂವರೆ ತಿಂಗಳಾಗಿತ್ತು. ಶರಾವತಿ ನಗರದ ತಮ್ಮ ನಿವಾಸದಿಂದ ಪತ್ನಿ ಸೌಮ್ಯ ಅವರ ತವರು ಮನೆಯಾದ ಗೋವಿಂದಪುರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಸಾಗರ ರಸ್ತೆ ಬಳಿಯ ರಿಂಗ್ ರೋಡ್‌ನಲ್ಲಿ ವೇಗವಾಗಿ ಬಂದ ಕಾರೊಂದು ನವದಂಪತಿ ಪ್ರಯಾಣಿಸುತ್ತಿದ್ದ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
