ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಸೂಡಾ ಅಧ್ಯಕ್ಷ ಮಧುಸೂದನ್ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಸನ್ಮಾನ 

ಹಂಚಿಕೊಳ್ಳಿ
WhatsApp Facebook X Telegram
Congress Felicitates SUDA Chief CJ Madhusudhan
Congress Felicitates SUDA Chief CJ Madhusudhan

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡುಟುಡೆ / ಸುದ್ದಿ : ಶಿವಮೊಗ್ಗ ನಗರದ 17ನೇ ವಾರ್ಡ್ ಕಾಂಗ್ರೆಸ್ ಘಟಕದ ಆಶ್ರಯದಲ್ಲಿ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ (SUDA) ನೂತನ ಅಧ್ಯಕ್ಷ ಸಿ.ಜೆ. ಮಧುಸೂದನ್ ಹಾಗೂ ಇತರ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಕಾರ್ಯಕರ್ತರ ಸಮಾವೇಶವನ್ನು ಗೋಪಾಲಗೌಡ ಬಡಾವಣೆಯ ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. 

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಕಾಂಗ್ರೆಸ್ ಪಕ್ಷವು ಯುವಪೀಳಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಪ್ರಮುಖ ಜವಾಬ್ದಾರಿಗಳನ್ನು ವಹಿಸುತ್ತಿದೆ ಎಂದರು. ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಭಾರತ್ ಜೋಡೋ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಪಕ್ಷಕ್ಕೆ ಹೊಸ ಹುರುಪು ಬಂದಿದೆ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಬಲಪಡಿಸುವುದರ ಜೊತೆಗೆ, ಬಡವರ ಏಳಿಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಜನಮನ ಗೆಲ್ಲಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಂಗ್ರೆಸ್ ವಕ್ತಾರ ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, ಪಕ್ಷವು ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಗೌರವಿಸುತ್ತದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ಪಕ್ಷದ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದ್ದು, ಸೂಡಾ ವತಿಯಿಂದ ನಗರಕ್ಕೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಲಾಗುತ್ತಿದೆ. ನಾವೆಲ್ಲರೂ ಒಂದಾಗಿ ಸರ್ಕಾರದ ಅನುದಾನಗಳನ್ನು ತಂದು 17ನೇ ವಾರ್ಡ್‌ನ ಸರ್ವತೋಮುಖ ಪ್ರಗತಿಗೆ ಕೈಜೋಡಿಸೋಣ ಎಂದು ಆಶಯ ವ್ಯಕ್ತಪಡಿಸಿದರು. 

ಇದೇ ವೇಳೆ, 40 ಲಕ್ಷ ರೂಪಾಯಿ ವೆಚ್ಚದ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿದ ಅವರು, ಜನೋಪಯೋಗಿ ಕೆಲಸಗಳಲ್ಲಿ ಪಕ್ಷ ರಾಜಕಾರಣ ಬೆರೆಸುವುದು ತರವಲ್ಲ ಎಂದರು. ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಲಭ್ಯವಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು 17ನೇ ವಾರ್ಡ್‌ನ ಅಭಿವೃದ್ಧಿಗೆ ಒತ್ತು ನೀಡೋಣ ಎಂದು ಹೇಳಿದರು. 

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸೂಡಾ ಅಧ್ಯಕ್ಷ ಸಿ.ಜೆ. ಮಧುಸೂದನ್, ತಾವು ಹೋರಾಟದ ಹಿನ್ನೆಲೆಯಿಂದ ಬೆಳೆದು ಬಂದವರಾಗಿದ್ದು, ಎಂದಿಗೂ ಅಧಿಕಾರದ ಬೆನ್ನುಹತ್ತಿದವರಲ್ಲ ಎಂದರು. ಆದರೆ ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಈ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಈ ಸ್ಥಾನವನ್ನು ಜನಸೇವೆಗಾಗಿ ಸಂಪೂರ್ಣವಾಗಿ ಮೀಸಲಿಡುತ್ತೇನೆ, ನನಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ಎಲ್ಲಕ್ಕಿಂತ ಮಿಗಿಲು ಎಂದು ಭಾವುಕರಾಗಿ ನುಡಿದರು. 

ಭಾರತ್ ಜೋಡೋ ಯುವ ಸಂಘಟನೆಯ ಸಮನ್ವಯಾಧಿಕಾರಿ ಗೀತೇಂದ್ರ ಗೌಡ ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಘಟಕದ ಸಂಚಾಲಕಿ ಕವಿತಾ ರಾಥೋಡ್ ಮಾತನಾಡಿ, ಯುವಕರಿಗೆ ಮತ್ತು ಮಹಿಳೆಯರಿಗೆ ಪಕ್ಷವು ಮಹತ್ವದ ಸ್ಥಾನಮಾನ ನೀಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ವರಿಷ್ಠರು ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಮತ್ತು ಸಮರ್ಥವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಮುಖಂಡರಾದ ಮಾರ್ಟಿನ್, ಹಾಲಪ್ಪ, ವಿಜಯಕುಮಾರ್, ನಾಜೀಮಾ, ಮಂಜುನಾಥ್ ಬಾಬು, ರೈಲ್ವೆ ಪ್ರಸಾದ್, ರವಿ ಬೋರೆಗೌಡ, ಜಬಿಉಲ್ಲಾ ಹಮೀದ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ವಿಜಯ್‌ಕುಮಾರ್ ಪ್ರಾರ್ಥನೆ ಸಲ್ಲಿಸಿದರೆ, ಶಿವಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಿ.ಜೆ. ಮಧುಸೂದನ್, ಗೀತೇಂದ್ರ ಗೌಡ ಹಾಗೂ ಕವಿತಾ ರಾಥೋಡ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor