ಭತ್ತ ಮೆಕ್ಕೆಜೋಳಕ್ಕೆ ಎಕರೆಗೆ ₹1,000, ಅಡಿಕೆಗೆ ₹5,000 ಕೊಡಿ! ಪೂರ್ತಿ ವಿಚಾರ ಹೀಗಿದೆ!

ಹಂಚಿಕೊಳ್ಳಿ
WhatsApp Facebook X Telegram
malenadutoday image
malenadutoday image

ಸುದ್ದಿಯ ಸ್ಥಳ: Sagara, Shivamogga, Karnataka

ಮಲೆನಾಡು ಟುಡೆ ಸುದ್ದಿ | ಸಾಗರ| ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹1,000 ಸಹಾಯಧನ ಘೋಷಿಸಿರುವಂತೆ ಮಲೆನಾಡು ಭಾಗದ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ಪ್ರತಿ ಎಕರೆಗೆ ₹1,000 ಹಾಗೂ ಅಡಿಕೆ ಬೆಳೆಗಾರರಿಗೆ ಪ್ರತಿ ಎಕರೆಗೆ ₹5,000 ಸಹಾಯಧನ ನೀಡಬೇಕು ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು ಒತ್ತಾಯಿಸಿದ್ದಾರೆ.

ಸಾಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ ಕಬ್ಬು ಬೆಳೆಗಾರರು ಮಾತ್ರ ಸಂಕಷ್ಟ ಎದುರಿಸುತ್ತಿಲ್ಲ. ಮಲೆನಾಡು ಭಾಗದಲ್ಲಿ ಭತ್ತ, ಮೆಕ್ಕೆಜೋಳ ಹಾಗೂ ಅಡಿಕೆ ಬೆಳೆಗಳನ್ನು ಅವಲಂಬಿಸಿರುವ ರೈತರೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆಯ ಅಭಾವದಿಂದ ಭತ್ತ ಮತ್ತು ಮೆಕ್ಕೆಜೋಳ ಬೆಳೆಯುವ ರೈತರು ತೊಂದರೆಗೆ ಸಿಲುಕಿದ್ದು, ಅಡಿಕೆ ಬೆಳೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ಬೆಳೆಗಾರರೂ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಕಬ್ಬು ಬೆಳೆಗಾರರು ಸಹಾಯಧನಕ್ಕಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರ್ಕಾರ ಸಹಾಯಧನ ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿಯಲ್ಲಿಯೇ ಭತ್ತ, ಮೆಕ್ಕೆಜೋಳ ಮತ್ತು ಅಡಿಕೆ ಬೆಳೆಗಾರರ ಸಮಸ್ಯೆಗಳಿಗೂ ಸರ್ಕಾರ ಗಮನಹರಿಸಬೇಕಾಗಿದೆ ಎಂದು ಆಗ್ರಹಿಸಿದರು.

ಮಲೆನಾಡು ಭಾಗದ ರೈತರು ಮಳೆಯ ಏರುಪೇರಿನಿಂದ ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಅತಿಯಾದ ಮಳೆಯಾದರೂ ಬೆಳೆ ನಾಶವಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾದರೂ ನಿರೀಕ್ಷಿತ ಫಸಲು ದೊರೆಯದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಗೊಳಗಾಗುವ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಳೆ ನಷ್ಟ ಮತ್ತು ರೈತರ ಸಂಕಷ್ಟಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಬಾರದು. ಒಂದು ಬೆಳೆಯ ರೈತರಿಗೆ ಸಹಾಯಧನ ನೀಡುವಾಗ ಇತರ ಬೆಳೆಗಾರರ ಸಮಸ್ಯೆಗಳನ್ನು ಕಡೆಗಣಿಸುವುದು ಸರಿಯಲ್ಲ. ಕಬ್ಬು ಬೆಳೆಗಾರರಿಗೆ ನೀಡಿರುವ ಸಹಾಯಧನದ ಮಾದರಿಯಲ್ಲಿಯೇ ಮಲೆನಾಡಿನ ಭತ್ತ, ಮೆಕ್ಕೆಜೋಳ ಮತ್ತು ಅಡಿಕೆ ಬೆಳೆಗಾರರಿಗೂ ಆರ್ಥಿಕ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಯೋಜನೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು, ಇತ್ತೀಚಿನ ವರ್ಷಗಳಲ್ಲಿ ಬೆಳೆ ವಿಮೆಯ ಹೆಸರಿನಲ್ಲಿ ರೈತರಿಗೆ ವಂಚನೆಯಾಗುತ್ತಿದೆ ಎಂದು ಆರೋಪಿಸಿದರು. ರೈತರು ಪಾವತಿಸುವ ವಿಮಾ ಮೊತ್ತಕ್ಕೆ ಹೋಲಿಸಿದರೆ ಬೆಳೆ ನಷ್ಟದ ಸಂದರ್ಭದಲ್ಲಿ ದೊರೆಯುತ್ತಿರುವ ಪರಿಹಾರ ಅತ್ಯಂತ ಕಡಿಮೆಯಾಗಿದೆ. ಇದರಿಂದ ವಿಮೆ ಮಾಡಿಸಿದರೂ ರೈತರಿಗೆ ನಿರೀಕ್ಷಿತ ಆರ್ಥಿಕ ನೆರವು ದೊರೆಯುತ್ತಿಲ್ಲ ಎಂದು ದೂರಿದರು.

ವಿಮಾ ಕಂಪನಿಗಳು ಸರ್ಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿವೆ. ಬೆಳೆ ನಷ್ಟವಾದಾಗ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆಯಿಂದ ರೈತರು ವಿಮಾ ಪ್ರೀಮಿಯಂ ಪಾವತಿಸುತ್ತಿದ್ದಾರೆ. ಆದರೆ ನಷ್ಟ ಸಂಭವಿಸಿದ ನಂತರ ವಿಮಾ ಪರಿಹಾರ ಪಡೆಯಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾ ಯೋಜನೆಯ ಮೇಲೆ ವಿಶ್ವಾಸವಿಟ್ಟು ಹಣ ಪಾವತಿಸುವ ರೈತರಿಗೆ ಸಮರ್ಪಕ ಪರಿಹಾರ ದೊರೆಯದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರಿಗೆ ಸಹಾಯಧನ ಘೋಷಿಸಿರುವ ರಾಜ್ಯ ಸರ್ಕಾರ ಮಲೆನಾಡಿನ ಇತರ ಬೆಳೆಗಾರರ ಸಂಕಷ್ಟವನ್ನೂ ಪರಿಗಣಿಸಬೇಕು. ಭತ್ತ ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ಎಕರೆಗೆ ₹1,000 ಹಾಗೂ ಅಡಿಕೆ ಬೆಳೆಗಾರರಿಗೆ ಎಕರೆಗೆ ₹5,000 ಸಹಾಯಧನ ನೀಡುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಎಂ.ಬಿ. ಮಂಜಪ್ಪ ಹಿರೇನೆಲ್ಲೂರು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೇವರು ಆಳಳ್ಳಿ ಹಾಗೂ ಬೇಬಿ ಗೋಳಗೋಡು ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor