ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಬಸವಕೇಂದ್ರ ವತಿಯಿಂದ ಆಯೋಜಿಸಿರುವ 20ನೇ ವರ್ಷದ ‘ಚಿಂತನ ಕಾರ್ತಿಕ’ ಕಾರ್ಯಕ್ರಮ ನವೆಂಬರ್ 13ರಿಂದ ಡಿಸೆಂಬರ್ 13ರವರೆಗೆ ನಗರದ ವಿವಿಧೆಡೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಶಿವಾನುಭವ ಚಿಂತನೆ, ಭಜನೆ, ದಾಸೋಹ ನಡೆಯಲಿದೆ ಬಸವಾದಿ ಶರಣರ ವಿಚಾರಧಾರೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಚಿಂತನೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕೇಂದ್ರಕ್ಕೆ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಚರಮೂರ್ತಿಗಳಾಗಿ ಆಗಮಿಸಿ 20 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚಿಂತನ ಕಾರ್ತಿಕವನ್ನು ವಿಶೇಷವಾಗಿ ಆಯೋಜಿಸಲಾಗಿದೆ. ಒಂದು ತಿಂಗಳ ಕಾಲ ವಿವಿಧ ಸ್ಥಳಗಳಲ್ಲಿ ಶಿವಾನುಭವ ಚಿಂತನೆ, ಭಜನೆ ಮತ್ತು ದಾಸೋಹ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ನವೆಂಬರ್ 13ರಂದು ಸಂಜೆ 6.30ಕ್ಕೆ ವೆಂಕಟೇಶನಗರದ ಬಸವಕೇಂದ್ರದಲ್ಲಿ ಚಿಂತನ ಕಾರ್ತಿಕದ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ವಿ. ಧನಂಜಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದು, ವಿಶ್ರಾಂತ ಕುಲಸಚಿವ ಡಾ. ಕೆ.ಸಿ. ಶಶಿಧರ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ. ಮಧುಸೂಧನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಜಿ. ಶಶಿಧರ್ ಹಾಗೂ ಕಾರ್ಯಾಧ್ಯಕ್ಷ ಎಂ.ಆರ್. ಜಯದೇವಪ್ಪ ಉಪಸ್ಥಿತರಿರಲಿದ್ದಾರೆ. ವಿದ್ಯುತ್ ಇಲಾಖೆ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಸವಕೇಂದ್ರದ ಸಂಯುಕ್ತಾಶ್ರಯದಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಸವಾದಿ ಶರಣರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ 2006ರಲ್ಲಿ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಚಿಂತನ ಕಾರ್ತಿಕ ಕಾರ್ಯಕ್ರಮವನ್ನು ಆರಂಭಿಸಿದರು. ಅಂದಿನಿಂದ ಕಾರ್ತಿಕ ಮಾಸದಲ್ಲಿ ಪ್ರತಿದಿನ ಒಂದೊಂದು ಮನೆಯಲ್ಲಿ ಶಿವಾನುಭವ ಚಿಂತನೆ, ಭಜನೆ ಹಾಗೂ ದಾಸೋಹ ನಡೆಸುವ ಪರಂಪರೆ ಮುಂದುವರಿದಿದೆ ಎಂದು ಬೆನಕಪ್ಪ ಹೇಳಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೇರವಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದರೂ ಆನ್‌ಲೈನ್ ಮೂಲಕ ಚಿಂತನ ಕಾರ್ತಿಕವನ್ನು ಮುಂದುವರಿಸಲಾಗಿತ್ತು. ಕಾರ್ಯಕ್ರಮವನ್ನು ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಈ ಮೂಲಕ ಬಸವಾದಿ ಶರಣರ ತತ್ವಗಳು ಮತ್ತು ಚಿಂತನೆಗಳನ್ನು ವಿವಿಧ ಪ್ರದೇಶಗಳ ಜನರಿಗೆ ತಲುಪಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಈ ವರ್ಷದ ಚಿಂತನ ಕಾರ್ತಿಕದಲ್ಲಿ ಬಸವಣ್ಣನವರ ವ್ಯಕ್ತಿತ್ವ, ವಿಚಾರಧಾರೆ ಹಾಗೂ ಅವರ ಚಿಂತನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮಗಳ ನಂತರ ಡಿಸೆಂಬರ್ 12ರಂದು ಸಮಾರೋಪ ಸಮಾರಂಭ ಆಯೋಜಿಸಲಾಗಿದ್ದು, ಡಿಸೆಂಬರ್ 13ರಂದು ಗಣಪರ್ವ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವಕೇಂದ್ರದ ಉಪಾಧ್ಯಕ್ಷ ಚಂದ್ರಪ್ಪ, ಕಾರ್ಯದರ್ಶಿ ಚಂದ್ರಶೇಖರ ತಲಗಿಹಾಳ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲವಕುಮಾರ್, ರುದ್ರಮುನಿ ಸಜ್ಜನ್, ಪ್ರಕಾಶ್, ಮಮತಾ, ಶಶಿಕಲಾ ಚಂದ್ರಪ್ಪ, ಗಾಯತ್ರಿ ಪಾಟೀಲ್ ಹಾಗೂ ನಿರಂಜನ ಸ್ವಾಮಿ ಉಪಸ್ಥಿತರಿದ್ದರು.
