
ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಲೆಗೆ ಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಗಾಂಜಾ ಮಾರಾಟ ಮತ್ತು ಸಾಗಣೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ರೌಡಿಶೀಟರ್ ಸಚಿನ್ ಎಂ.ಎಸ್. ಅಲಿಯಾಸ್ ಸಚಿನ್ ಅಲಿಯಾಸ್ ಶ್ಯಾಡೋ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆರೋಪಿಯನ್ನು ಬಂಧಿಸಿ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.



ಶಿವಮೊಗ್ಗ ಗ್ರಾಮಾಂತರ, ಜಯನಗರ, ದೊಡ್ಡಪೇಟೆ, ಕೋಟೆ, ವಿನೋಬನಗರ ಹಾಗೂ ಆನಂದಪುರ ಪೊಲೀಸ್ ಠಾಣೆಗಳಲ್ಲಿ ಸಚಿನ್ ವಿರುದ್ಧ ಕೊಲೆಗೆ ಪ್ರಯತ್ನ, ಸುಲಿಗೆ, ದೊಂಬಿ, ಜೀವ ಬೆದರಿಕೆ, ಮಾದಕ ವಸ್ತುವಾದ ಗಾಂಜಾ ಮಾರಾಟ ಮತ್ತು ಸಾಗಣೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ
ಆರೋಪಿ ನಿರಂತರವಾಗಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುವುದರಿಂದ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿಪಾಸ್ತಿಗೆ ಅಪಾಯ ಉಂಟಾಗುವ ಸಂಭವವಿದೆ. ಹೀಗಾಗಿ ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲುಜಿಲ್ಲಾಧಿಕಾರಿಗಳಿಗೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.

ಸಚಿನ್ ವಿರುದ್ಧ ಕರ್ನಾಟಕ ಭಟ್ಟಿ ಸಾರಾಯಿ ವ್ಯವಹಾರ, ಔಷಧಾಪರಾಧ, ಅನೈತಿಕ ಅಪರಾಧ, ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವಿಕೆ ಹಾಗೂ ವಿಡಿಯೋ ಅಥವಾ ಆಡಿಯೋ ಪೈರಸಿ ಚಟುವಟಿಕೆಗಳ ತಡೆಗೆ ಸಂಬಂಧಿಸಿದ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು
ಪೊಲೀಸ್ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು ನವೆಂಬರ್ 6, 2026ರಂದು ಸಚಿನ್ ಎಂ.ಎಸ್. ಅಲಿಯಾಸ್ ಶ್ಯಾಡೋನನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಹೊರಡಿಸಿದ್ದರು.
ಜಿಲ್ಲಾಧಿಕಾರಿಗಳ ಆದೇಶದ ಅನುಸಾರ ಆರೋಪಿಯನ್ನು ಬಂಧಿಸಿದ ಪೊಲೀಸರು ನವೆಂಬರ್ 7ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

