ಮಲೆನಾಡು ಟುಡೆ ಸುದ್ದಿ / ನರಸಿಂಹರಾಜಪುರ / ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ರಾವೂರು ಗ್ರಾಮದ ಭದ್ರಾ ಹಿನ್ನೀರಿನ ಸಿದ್ದರಾಮಯ್ಯ ಸೇತುವೆ ಸಮೀಪದ ಅಕೇಶಿಯ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೊಬ್ಬ ಪತ್ತೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ನರಸಿಂಹರಾಜಪುರ ಪಟ್ಟಣದ ನಿವಾಸಿ ಸೈಯ್ಯದ್ ಸಾಹಿಲ್ (24) ಎಂದು ಗುರುತಿಸಲಾಗಿದೆ.
ನರಸಿಂಹರಾಜಪುರ ಪಟ್ಟಣದ 5ನೇ ವಾರ್ಡಿನ ಜಿ.ಆರ್. ಮಿಲ್ ರಸ್ತೆಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದ ಸೈಯ್ಯದ್ ಸಾಹಿಲ್, ಕಳೆದ 1 ವರ್ಷದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಸುಮಾರು 5 ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದ ಸೈಯ್ಯದ್ ಸಾಹಿಲ್ ಬಳಿಕ ಮನೆಗೆ ಹಿಂದಿರುಗಿರಲಿಲ್ಲ. ಕುಟುಂಬದವರು ಅವರ ಬರುವಿಕೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಪರಿಚಿತರೊಬ್ಬರು ದೂರವಾಣಿ ಕರೆ ಮಾಡಿ ಸಾವಿನ ವಿಷಯ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ 6.20ರಿಂದ 10 ಗಂಟೆಯ ನಡುವಿನ ಅವಧಿಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ.
