ಶಿವಮೊಗ್ಗ ತುಂಗಾ ಸೇತುವೆಗೆ ₹40 ಕೋಟಿ! ಭದ್ರಾವತಿಗೆ ₹42 ಕೋಟಿ ಮಂಜೂರು! ಸಚಿವರು, ಶಾಸಕರು ಖುಶ್! ಏನಂದ್ರು!

ಹಂಚಿಕೊಳ್ಳಿ
WhatsApp Facebook X Telegram
Shivamogga Tunga Bridge Gets ₹40 Crore Approval, Bhadravathi Bridge ₹42 Crore
Shivamogga Tunga Bridge Gets ₹40 Crore Approval, Bhadravathi Bridge ₹42 Crore

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / 155 ವರ್ಷಗಳಷ್ಟು ಹಳೆಯದಾದ ಶಿವಮೊಗ್ಗ ತುಂಗಾ ಸೇತುವೆ ಪುನರ್ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸರ್ಕಾರ ಒಪ್ಪಿತ್ತು. ಇದೀಗ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ₹40 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಇದರೊಂದಿಗೆ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಪುನರ್ ನಿರ್ಮಾಣಕ್ಕೂ ₹42 ಕೋಟಿ ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಸಂಪುಟದ ಒಪ್ಪಿಗೆ ಪತ್ರವನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಹಳೆಯ ತುಂಗಾ ಸೇತುವೆ ಸ್ಥಳದಲ್ಲಿ 292.03 ಮೀಟರ್ ಉದ್ದ ಹಾಗೂ 12 ಮೀಟರ್ ಅಗಲದ ಹೊಸ ಸೇತುವೆ ನಿರ್ಮಿಸಲಾಗುತ್ತದೆ. ಈ ಕಾಮಗಾರಿಗೆ ₹40 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ ಎಂದವರು ತಿಳಿಸಿದ್ದಾರೆ.

ಇನ್ನೊಂದೆಡೆ ಈ ಬಗ್ಗೆ ಪ್ರಕಟಣೆ ನೀಡಿರುವ ಶಾಸಕ ಎಸ್​.ಎನ್​ ಚನ್ನಬಸಪ್ಪ, ನಗರದ ತುಂಗಾ ನದಿಗೆ ನೂತನ ಸೇತುವೆ ನಿರ್ಮಿಸುವ ಸಂಬಂಧ ತಾವು ನಿರಂತರವಾಗಿ ಪ್ರಯತ್ನ ನಡೆಸಿದ್ದಾಗಿ ತಿಳಿಸಿದ್ದಾರೆ. ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಸೇತುವೆ ನಿರ್ಮಿಸುವುದು ಅತ್ಯಂತ ಅಗತ್ಯವಾಗಿತ್ತು . ಹೊಸ ಸೇತುವೆ ನಿರ್ಮಾಣದ ಅಗತ್ಯವನ್ನು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಸಂಬಂಧ ನಿರಂತರ ಚರ್ಚೆ ನಡೆಸಿ, ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸತತ ಪ್ರಯತ್ನಗಳ ಫಲವಾಗಿ ಯೋಜನೆಗೆ ಆಡಳಿತಾತ್ಮಕ ಹಾಗೂ ಆರ್ಥಿಕ ಅನುಮೋದನೆ ದೊರೆತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಯೋಜನೆಗೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಮುಂದಿನ ಹಂತವಾಗಿ ಟೆಂಡರ್ ಪ್ರಕ್ರಿಯೆ ಸೇರಿದಂತೆ ಅಗತ್ಯ ತಾಂತ್ರಿಕ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಿ, ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಸೇತುವೆ ನಿರ್ಮಾಣ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಪ್ರಯತ್ನಿಸುವುದಾಗಿ ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸಿದ್ಧಾರೂಢ ನಗರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಪುನರ್ ನಿರ್ಮಾಣಕ್ಕೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಳೆಗಾಲದಲ್ಲಿ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದಾಗ ಈ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ₹42 ಕೋಟಿ ವೆಚ್ಚದಲ್ಲಿ 210 ಮೀಟರ್ ಉದ್ದ ಹಾಗೂ 19.61 ಮೀಟರ್ ಅಗಲದ ಆರ್‌ಸಿಸಿ ಡೆಕ್ ಸ್ಲ್ಯಾಬ್ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ. ಹೊಸ ಸೇತುವೆ ನಿರ್ಮಾಣದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಸಿದ್ಧಾರೂಢ ನಗರದ ನಡುವಿನ ಸಂಚಾರ ವ್ಯವಸ್ಥೆ ಸುಧಾರಿಸುವ ನಿರೀಕ್ಷೆಯಿದೆ.

ಇನ್ನೂ ಈ ಎರಡು ಯೋಜನೆಗಳಿಗೆ ಸಮ್ಮತಿ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಸಚಿವ ಮಧು ಬಂಗಾರಪ್ಪ ಧನ್ಯವಾದ ತಿಳಿಸಿದ್ದಾರೆ

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor