ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ಆಶ್ಚರ್ಯಕರ ಹಾಗೂ ಅಪರೂಪದ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವುಗಳು ಕೊನೆಗೆ 112 ಸಿಬ್ಬಂದಿಯ ಬಳಿ ತಲುಪಿ, ಅಲ್ಲಿಯೂ ಬಗೆಹರಿಯದೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತವೆ. ಅಂತಹದ್ದೇ ಒಂದು ಘಟನೆ ನಡೆದಿದ್ದು, ಹೆಂಡತಿಗೆ ತಿಳಿಯದೆ ಮತ್ತೊಂದು ಮದುವೆಯಾದ ಗಂಡ, ಇಬ್ಬರ ನಡುವೆ ನಡೆಯುತ್ತಿರುವ ಜಗಳವನ್ನು ತಪ್ಪಿಸಲು 112 ಪೊಲೀಸರ ಮೊರೆ ಹೋಗಿದ್ದಾರೆ.
ಹೌದು, ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಿಂದ 112 ಸಿಬ್ಬಂದಿಗೆ ಫೋನ್ ಕರೆ ಬಂದಿದೆ. ಕರೆಯನ್ನು ಸ್ವೀಕರಿಸಿದಾಗ, ಸರ್, ನಾನು ನನ್ನ ಹೆಂಡತಿಗೆ ತಿಳಿಯದೆ 2ನೇ ಮದುವೆಯಾಗಿದ್ದೇನೆ. ಇದೀಗ ಆ ವಿಚಾರ ಮೊದಲನೇ ಹೆಂಡತಿಗೆ ತಿಳಿದಿದ್ದು, ಇಬ್ಬರೂ ಜಗಳವಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರ ಜಗಳವನ್ನು ನಿಲ್ಲಿಸಿ ಸೂಕ್ತ ತಿಳಿವಳಿಕೆ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ.
