ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಟುಡೆ ದೈನಿಕದ ಇಂದಿನ ಇ-ಪತ್ರಿಕೆಯಲ್ಲಿ ರಾಜ್ಯ ರಾಜಕಾರಣ, ಜಿಲ್ಲೆಯ ಅಭಿವೃದ್ಧಿ ಹೋರಾಟ, ಅಪಘಾತಗಳು ಹಾಗೂ ಸ್ಥಳೀಯ ಮಟ್ಟದ ಮಹತ್ವದ ಬೆಳವಣಿಗೆಗಳ ಸಮಗ್ರ ವರದಿಯನ್ನು ಪ್ರಕಟಿಸಲಾಗಿದೆ.
ಇಂದಿನ ಪತ್ರಿಕೆಯ ಪ್ರಮುಖ ಸುದ್ದಿಗಳ ಮುಖ್ಯಾಂಶಗಳು ಇಂತಿವೆ. ರಾಜ್ಯದಲ್ಲಿ ಹಾಲಿನ ದರವನ್ನು ಹೆಚ್ಚಿಸಿರುವ ಸರ್ಕಾರದ ನಿರ್ಧಾರವನ್ನು ಸಚಿವ ನರೇಂದ್ರ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಹಾಲಿನ ದರ ಏರಿಕೆಯ ಸಂಪೂರ್ಣ ಲಾಭ ರೈತರು ಹಾಗೂ ಹಾಲು ಒಕ್ಕೂಟಗಳಿಗೆ ತಲುಪಲಿದ್ದು, ಇದರಲ್ಲಿ ಸರ್ಕಾರ ಯಾವುದೇ ಪಾಲನ್ನು ಉಳಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಶಿವಮೊಗ್ಗದಲ್ಲಿ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಲೆನಾಡು ಭಾಗದ ಜನರ ದಶಕಗಳ ಕನಸನ್ನು ನನಸಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ತಾವು ಬದ್ಧವಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದೇ ಬೇಡಿಕೆ ಮುಂದಿಟ್ಟುಕೊಂಡು ಹೊಸನಗರದಲ್ಲೂ ವಕೀಲರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನ್ಯಾಯಾಲಯದ ಮಹತ್ವದ ಬೆಳವಣಿಗೆಯೊಂದರಲ್ಲಿ, 2011ನೇ ಸಾಲಿನ 362 ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯನ್ನು ಸಿಂಧುಗೊಳಿಸಲು ರಾಜ್ಯ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ವಿಶೇಷ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಮಹತ್ವದ ತೀರ್ಪಿನಿಂದಾಗಿ ಪ್ರಸ್ತುತ ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 362 ಅಧಿಕಾರಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ.
ಜಿಲ್ಲೆಯ ಗ್ರಾಮೀಣ ಭಾಗದ ವಿಶಿಷ್ಟ ಸುದ್ದಿಯೊಂದರಲ್ಲಿ, ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೊರಬ ತಾಲೂಕಿನ ಗುಡವಿ ಗ್ರಾಮಸ್ಥರು ವಿವಾಹ ಸಮಾರಂಭಗಳ ಅದ್ದೂರಿ ಬೀಗರೂಟವನ್ನು ಸಂಪೂರ್ಣವಾಗಿ ನಿಷೇಧಿಸಿ ದಿಟ್ಟ ನಿರ್ಣಯ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿ ಬೀಗರೂಟ ಆಯೋಜಿಸಿದರೆ 1 ಲಕ್ಷ ರೂ. ಹಾಗೂ ಊಟ ಸವಿದವರಿಗೆ 50,000 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.
ಇದಲ್ಲದೆ, ಶಿರಾಳಕೊಪ್ಪದ ಜಾವಗಟ್ಟಿ ಸಮೀಪ ಹಾಗೂ ಶಿಕಾರಿಪುರದಲ್ಲಿ ಸಂಭವಿಸಿದ ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿರುವ ವರದಿಗಳು ಇಂದಿನ ಸಂಚಿಕೆಯಲ್ಲಿವೆ.
ಇವತ್ತಿನ ಪತ್ರಿಕೆಯನ್ನ ಡೌನ್ಲೋಡ್ ಮಾಡಿಕೊಳ್ಳಿ PDF
