ಮಲೆನಾಡು ಟುಡೆ ಸುದ್ದಿ / ರಿಪ್ಪನ್ಪೇಟೆ / ಇಲ್ಲಿನ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದಲ್ಲಿ ಅಕ್ರಮವಾಗಿ ಕಡಿದಿದ್ದ ಸುಮಾರು ₹4 ಲಕ್ಷ ಮೌಲ್ಯದ ಸಾಗುವಾನಿ ನಾಟವನ್ನು ಅರಸಾಳು ವಲಯ ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬೆಳಂದೂರು ಗ್ರಾಮದ ಸರ್ವೆ ನಂಬರ್ 51ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆ ವೇಳೆ ಅಕ್ರಮವಾಗಿ ಕಡಿದಿದ್ದ ಸಾಗುವಾನಿ ಮರಗಳ 24 ತುಂಡುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಉದ್ದ ಸುಮಾರು 100 ಅಡಿ ಎಂದು ಅಂದಾಜಿಸಲಾಗಿದ್ದು, ವಶಪಡಿಸಿಕೊಂಡ ಸಾಗುವಾನಿ ನಾಟದ ಮೌಲ್ಯ ಸುಮಾರು ₹4 ಲಕ್ಷ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ
ಕಾರ್ಯಾಚರಣೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ, ಉಪ ವಲಯ ಅರಣ್ಯಾಧಿಕಾರಿ ಸುನಿಲ್, ಕುಮಾರ್ ಮಾಂಗ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
