ಶಿವಮೊಗ್ಗದಲ್ಲಿ ಊರು ಬಿಟ್ಟವರದ್ದೇ ಸಂಖ್ಯೆ ಜಾಸ್ತಿ! 1,88,554 ವೋಟು ಡಿಲೀಟು ಯಾರೆಲ್ಲಾ ಇರುವರು? ಕುತೂಹಲ ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
Shivamogga SIR Final Voter List 2026 1.88 Lakh Names Removed, 23,753 Added
Shivamogga SIR Final Voter List 2026 1.88 Lakh Names Removed, 23,753 Added

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ಸ್ಟೇಟ್​ ಲಿಸ್ಟ್ ಹೊರಬಿದ್ದಂತೆ, ಶಿವಮೊಗ್ಗ ಜಿಲ್ಲೆಯ ಲಿಸ್ಟ್​ ಸಹ ಹೊರಬಿದ್ದಿದೆ. ಈ ಲಿಸ್ಟ್​ನಲ್ಲಿರುವ ಅಂಕಿ ಅಂಶಗಳು ಸಾಕಷ್ಟು ಕುತೂಹಲ ಮೂಡಿಸ್ತಿದೆ.

ಲಿಸ್ಟ್​ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪರಿಷ್ಕರಣೆಗೂ ಮುನ್ನ ಜಿಲ್ಲೆಯಲ್ಲಿ 15,19,459 ಮತದಾರರಿದ್ದು, ಅಂತಿಮ ಪಟ್ಟಿಯಲ್ಲಿ 13,54,046 ಮತದಾರರು ಉಳಿದಿದ್ದಾರೆ ಅಂಥಾ ತಿಳಿಸಿದ್ದಾರೆ.

2026ರ ಜೂನ್ 16ರಂದು ಜಿಲ್ಲೆಯ ಮತದಾರರ ಪಟ್ಟಿಯನ್ನು ಫ್ರೀಜ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಒಟ್ಟು 15,19,459 ಮತದಾರರಿದ್ದರು. ನಂತರ ಮತದಾರರ ಗಣತಿ ಪ್ರಕ್ರಿಯೆ ಆರಂಭಿಸಿ, ಪಟ್ಟಿಯಲ್ಲಿದ್ದ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಕ್ಷೇತ್ರಮಟ್ಟದಲ್ಲಿ ಸಂಗ್ರಹಿಸಿದ ಮಾಹಿತಿ ಹಾಗೂ ದಾಖಲೆಗಳ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಗಣತಿ ನಮೂನೆಗಳನ್ನು ವಿತರಿಸಿದ ನಂತರವೂ ಮಾಹಿತಿ ಲಭ್ಯವಾಗದ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದರಲ್ಲಿ 13,30,905 ಮತದಾರರ ಹೆಸರುಗಳಿದ್ದು, ಮೂಲ ಪಟ್ಟಿಗೆ ಹೋಲಿಸಿದರೆ 1,88,554 ಮತದಾರರ ಹೆಸರುಗಳನ್ನು ಕೈಬಿಡಲಾಗಿತ್ತು ಎಂದು ತಿಳಿಸಿದರು.

ಈ ಪೈಕಿ ಮರಣ ಹೊಂದಿದ 46,693 ಮತದಾರರು, ನೋಂದಾಯಿತ ವಿಳಾಸದಲ್ಲಿ ಲಭ್ಯವಿಲ್ಲದ 23,165 ಮತದಾರರು, ಶಾಶ್ವತವಾಗಿ ಸ್ಥಳಾಂತರಗೊಂಡ 99,275 ಮತದಾರರು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ 19,481 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಈ ಎಲ್ಲಾ ವಿಭಾಗಗಳನ್ನು ಸೇರಿಸಿ ಒಟ್ಟು 1,88,554 ಮತದಾರರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಕರಡು ಮತದಾರರ ಪಟ್ಟಿಯ ಪರಿಶೀಲನೆ ಸಂದರ್ಭದಲ್ಲಿ ತಾರ್ಕಿಕ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ 48,660 ಮಂದಿಗೆ ನೋಟಿಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಕೇವಲ 612 ಮಂದಿ ಮಾತ್ರ ಹಾಜರಾಗಿದ್ದರು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದರು.

ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರವೂ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಹೆಸರು ತೆಗೆದುಹಾಕುವ ಸಂಬಂಧ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಫಾರ್ಮ್ 6, ಫಾರ್ಮ್ 6ಎ, ಫಾರ್ಮ್ 7 ಹಾಗೂ ಫಾರ್ಮ್ 8 ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಈ ಪ್ರಕ್ರಿಯೆಯ ಫಲವಾಗಿ 23,753 ಹೊಸ ಮತದಾರರು ಅಂತಿಮ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ 13,30,905 ಮತದಾರರಿದ್ದು, ನಂತರದ ಪರಿಷ್ಕರಣೆಯ ಬಳಿಕ ಅಂತಿಮ ಪಟ್ಟಿಯಲ್ಲಿ ಒಟ್ಟು 13,54,046 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor